ಮೇ 21-22ರಂದು ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ರಾಜ್ಯದಲ್ಲಿ 15ಸಾವಿರ ಶಿಕ್ಷಕರ ನೇಮಕಾತಿ ಸಂಬಂಧಿಸಿ ಸಾಮಾನ್ಯ ಪ್ರವೇಶ ಪರೀಕ್ಷೆಯು ಮೇ 21 ಮತ್ತು 22ರಂದು ನಡೆಯಲಿದೆ. ಆರರಿಂದ ಎಂಟು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಪರೀಕ್ಷೆಗೆ ಮಾ. 22ರಿಂದ ಏಪ್ರಿಲ್ 22ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಪರೀಕ್ಷೆಗೆ ಮೂರು ಪತ್ರಿಕೆಗಳು ಇರುತ್ತವೆ. ಮೊದಲ ಮತ್ತು ಎರಡನೇ ಪತ್ರಿಕೆ ತಲಾ 150 ಅಂಕಗಳು ಮತ್ತು ಕೊನೆಯ ಪತ್ರಿಕೆ 100 ಅಂಕಗಳಿಗೆ ಇರುತ್ತದೆ. ಎರಡನೇ ಪತ್ರಿಕೆ ಅರ್ಹತಾ ಅಂಕಗಳನ್ನು 50ರಿಂದ 45ಕ್ಕೆ ಮತ್ತು ಮೂರನೇ ಪತ್ರಿಕೆ 60ರಿಂದ 50ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ನೇಮಕಾತಿಯಲ್ಲಿ ನಾಲ್ಕು ವಿಷಯಗಳ ಹುದ್ದೆಗಳಿಗೆ ಅಂದರೆ ಆಂಗ್ಲಭಾಷೆ, ಗಣಿತ ಮತ್ತು ವಿಜ್ಞಾನ, ಜೀವವಿಜ್ಞಾನ (ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಎರಡನೇ ಹುದ್ದೆ) ಮತ್ತು ಸಮಾಜಪಾಠಗಳು ಶಿಕ್ಷಕರ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ನೇಮಕಾತಿಯ 15000 ಹುದ್ದೆಗಳಲ್ಲಿ 5000 ಹುದ್ದೆಗಳು ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಮೀಸಲಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

2022-23ನೇ ಸಾಲಿನಿಂದ ಕಲಿಕಾ ಚೇತರಿಕೆ
ಮುಂದಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟದ ಕಡೆಗೆ ಒತ್ತು ಕೊಡಬೇಕಿದೆ. 2022-23ರ ಸಾಲಿಗೆ ಪ್ರತಿ ಮಗುವಿನ ಕಲಿಕಾ ಪ್ರಯತ್ನವನ್ನು ಮೇಲಕ್ಕೆತ್ತುವ ಪ್ರಯತ್ನ ಭಾಗವಾಗಿ ಕಲಿಕಾ ಚೇತರಿಕೆ ಜಾರಿಯಾಗಲಿದೆ. ಕೆಲ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಲಾಗುತ್ತಿದೆ. ಅಕ್ಕಪಕ್ಕದ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಇದು ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದಿದೆ ಎಂದು ಸಚಿವ ನಾಗೇಶ್ ತಿಳಿಸಿದರು.

ಕಲಿಕಾ ಚೇತರಿಕೆಯಲ್ಲಿ ಶಿಕ್ಷಕರು ಭಾಗವಹಿಸಬೇಕು. ಕಳೆದ ಎರಡು ವರ್ಷಗಳಿಂದ ಶಾಲೆ ಮುಖವನ್ನೇ ನೋಡದ ಮಕ್ಕಳು 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. ಅಂತಹ ಮಕ್ಕಳಿಗೆ ಧೈರ್ಯ ತುಂಬಬೇಕು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಮಕ್ಕಳು ತುಂಬಾ ಹಿಂದೆ ಇದ್ದಾರೆ ಎಂದು ಸಚಿವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!