ದಿನಾಂಕ ಬದಲಿಸಿ ಶಿಕ್ಷಕರ ದಿನಾಚರಣೆ, ಆದರೂ ಬಾರದ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ

ಹೊಸದಿಗಂತ ವರದಿ ಸೋಮವಾರಪೇಟೆ:

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ದಿನಾಂಕ ಬದಲಿಸಿದ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದು, ಜಿಲ್ಲೆಯ ಉನ್ನತಾಧಿಕಾರಿಗಳೂ ಜನಪ್ರತಿನಿಧಿಗಳಿಗೆ ಸಾಥ್ ನೀಡುವುದರೊಂದಿಗೆ ಶಿಕ್ಷಕ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಕೆಲ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪ್ರತಿವರ್ಷ ಸೆ.5ರರಂದು ಶಿಕ್ಷಕರ ದಿನಾಚರಣೆಯನ್ನು ತಪ್ಪದೇ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತಿತ್ತು. ಅದರಂತೆ ಈ ಬಾರಿ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು.

ಬೇರೆಡೆ ಕಾರ್ಯಕ್ರಮಗಳು ಇರುವುದರಿಂದ ಸೋಮವಾರಪೇಟೆ ತಾಲೂಕಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸೆ.26 ರಂದು ಕಾರ್ಯಕ್ರಮ ಇಟ್ಟುಕೊಳ್ಳುವಂತೆ ಹೇಳಿದ ಜನಪ್ರತಿಧಿಯ ಅಣತಿಯನ್ನು ಪಾಲಿಸಿದ ಶಿಕ್ಷಕರ ಸಂಘ ಇಂದು ಕಾರ್ಯಕ್ರಮ ಆಯೋಜಿಸಿ ಕೊಂಡಿತ್ತು. ಆದರೆ ಇಂದಿನ ಕಾರ್ಯಕ್ರಮಕ್ಕೂ ಜನಪ್ರತಿನಿಧಿ ಗೈರಾಗಿದ್ದು, ಶಿಕ್ಷಕರ ಸಂಘದ ಕೆಲ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ ಜಿಲ್ಲಾ ಮಟ್ಟದ ಕೆಲ ಅಧಿಕಾರಿಗಳೂ ಚಕ್ಕರ್ ಹೊಡೆಯುವ ಮೂಲಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಯಿತು.

ಶಿಕ್ಷಕರ ವಿವಿಧ ಘಟಕಗಳ ಪದಾಧಿಕಾರಿಗಳು ವೇದಿಕೆಯ ಮೇಲೆ ಆಸೀನರಾಗಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿದರಾದರೂ, ಮಹತ್ವವಿರುವ ದಿನ ನಡೆಸದ ಕಾರ್ಯಕ್ರಮ ಮಹತ್ವ ಕಳೆದುಕೊಂಡಿದ್ದಂತೂ ಸುಳ್ಳಲ್ಲ.

ಜನಪ್ರತಿನಿಧಿ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳ ನಡುವಣ ಮುಸುಕಿನ ಗುದ್ದಾಟದ ಸೇಡನ್ನು ಜನಪ್ರತಿನಿಧಿ ಈ ರೀತಿ ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಸಭಿಕರಲ್ಲಿ ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!