Sunday, August 14, 2022

Latest Posts

ರಾಜ್ಯದ ಮಾದರಿ ವೈಜ್ಞಾನಿಕ ಕಸ ವಿಲೇವಾರಿ ಘಟಕಕ್ಕೆ ಕೇಂದ್ರ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ತಂಡ ಭೇಟಿ, ಪರಿಶೀಲನೆ

ಹೊಸ ದಿಗಂತ ವರದಿ, ಕುಶಾಲನಗರ:

ಸ್ವಚ್ಛ ಭಾರತ ಯೋಜನೆಯಡಿ ಮುಳ್ಳುಸೋಗೆ ಗ್ರಾ.ಪಂ.ಯಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ, ರಾಜ್ಯದ ಮಾದರಿ ವೈಜ್ಞಾನಿಕ ಕಸ ವಿಲೇವಾರಿ ಘಟಕಕ್ಕೆ ಕೇಂದ್ರ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಕುಮಾರ್ ಹಾಗೂ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕ ಸರಕಾರದ ಸ್ವಚ್ಛ ಭಾರತ ಯೋಜನೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾ ಮಹಾದೇವನ್, ಮತ್ತು ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ರಾಜ್ಯದ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಾದ ಕೆಂಪೇಗೌಡ ಮತ್ತು ಕುಮಾರ್ ಅವರುಗಳು ತಂಡದಲ್ಲಿದ್ದು, ಮುಳ್ಳುಸೋಗೆ ಗ್ರಾಮ ಪಂಚಾಯತಿಯ ಕಸ ವಿಲೇವಾರಿ ಘಟಕದ ಸಮಗ್ರವಾದ ಮಾಹಿತಿಯನ್ನು ಜಿಲ್ಲಾ ಸ್ವಚ್ಛ ಭಾರತ ಯೋಜನೆಯ ಅಧಿಕಾರಿಗಳಿಂದ ಪಡೆದರು.
ಮುಳ್ಳುಸೋಗೆ ಕಸ ವಿಲೇವಾರಿ ಘಟಕವು ರಾಜ್ಯಕ್ಕೆ ಮಾದರಿಯಾಗಿದ್ದು, ಸ್ವಚ್ಛ ಭಾರತ ಯೋಜನೆಯ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಹಸಿ ಕಸವನ್ನು ಪಿಟ್ ಕಾಂಪೋಸ್ಟ್ ಹಾಗೂ ನದಾಪ್ ಮಾದರಿಯಲ್ಲಿ ಗೊಬ್ಬರವನ್ನಾಗಿ ಪರಿವರ್ತನೆ ಮಾಡಿ ಈಗಾಗಲೇ ಮಾರಾಟ ಮಾಡುತ್ತಿದೆ. ತ್ಯಾಜ್ಯದ ಪ್ರತಿಯೊಂದು ಪದಾರ್ಥ ವಿಂಗಡಣೆ ಮಾಡಿ ಪ್ರತ್ಯೇಕ-ಪ್ರತ್ಯೇಕವಾಗಿ ವಿಲೇವಾರಿ ಮಾಡುತ್ತಿರುವುದನ್ನು ಸಚಿವಾಲಯದ ತಂಡ ಮತ್ತು ರಾಜ್ಯ ಕಾರ್ಯದರ್ಶಿ ತಂಡದವರು ವೀಕ್ಷಣೆ ಮಾಡುವುದರೊಂದಿಗೆ ಕಸ ವಿಲೇವಾರಿ ಘಟಕದ ಅನುಭವಿ ಕಾರ್ಮಿಕರಿಂದ ಅದರ ಸಂಪೂರ್ಣ ಮಾದರಿಯನ್ನೂ ಪಡೆದರು
ಒಣ ತ್ಯಾಜ್ಯವನ್ನು ಬೇಲಿಂಗ್ ಮಾಡುವ ಮುಖಾಂತರ ಸ್ಥಳಾವಕಾಶದ ಸದ್ಬಳಕೆ ಮಾಡಿಕೊಳ್ಳುತ್ತಿರುವ ಏಕೈಕ ಗ್ರಾಮ ಪಂಚಾಯತಿ ಎಂಬ ಹಿರಿಮೆಗೆ ಪಾತ್ರವಾಗಿರುವ ಈ ಘಟಕಕ್ಕೆ ಭೇಟಿ ನೀಡಿ ಪ್ರತಿಯೊಂದು ಹಂತದಲ್ಲಿಯೂ ಪರಿಶೀಲನೆ ಮಾಡಿ ಅಧಿಕಾರಿಗಳು ಮಾಹಿತಿಯನ್ನು ಪಡೆದರು.
ಈ ಸಂದರ್ಭ ರಾಜ್ಯ ಸರ್ಕಾರ ನೀಡಿದ ಹಣವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕಸವನ್ನು ವಿವಿಧ ಗೊಬ್ಬರಗಳನ್ನಾಗಿ ಪರಿವರ್ತಿಸುವ ಕಾರ್ಮಿಕರ ಕಾರ್ಯವನ್ನು ವೀಕ್ಷಿಸಿದ ಸಚಿವಾಲಯದ ತಂಡ ಮೆಚ್ಚುಗೆ ವ್ಯಕ್ತಪಡಿತಲ್ಲದೆ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನೂ ಶ್ಲಾಘಿಸಿತು.
ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸೀಗ್ ಮೀನಾ, ಸೋಮವಾರಪೇಟೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಯಣ,್ಣ ತಾಲೂಕು ಸಹಾಯಕ ನಿರ್ದೇಶಕ ರವೀಶ್, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ, ಮುಳ್ಳುಸೋಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಚಲುವರಾಜ್, ಉಪಾಧ್ಯಕ್ಷೆ ಜಯಮ್ಮ ಮತ್ತು ಸದಸ್ಯರು, ಅಭಿವೃದ್ಧಿ ಅಧಿಕಾರಿ ರಾಜೇಶ್ ಮತ್ತು ಜಿಲ್ಲಾ ಸ್ವಚ್ಛ ಭಾರತ ಯೋಜನೆಯ ಅಧಿಕಾರಿಗಳಾದ ಪೆಮ್ಮಯ್ಯ, ರಾಜೇಶ್, ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ಯಾಂ ,ಕೆದಕಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೆಚ್ ಎಸ್.ರಾಜಶೇಖರ್, ಕಸ ವಿಲೇವಾರಿ ಘಟಕದ ಸಮವಸ್ತ್ರ ಧರಿಸಿದ ಇಪ್ಪತ್ತಕ್ಕೂ ಅಧಿಕ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss