ಹೊಸದಿಗಂತ ವರದಿ, ಮಂಡ್ಯ:
ಮೈಶುಗರ್’ಗೆ ತಾಂತ್ರಿಕ ಸಮಿತಿ ಭೇಟಿ ನೀಡಿ ಪರಿಶೀಲಿಸುವ ಮುನ್ನವೇ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪ್ರಧಾನ ವ್ಯವಸ್ಥಾಪಕರು, ಮುಖ್ಯ ಇಂಜಿನಿಯರ್, ನುರಿತ ತಂತ್ರಜ್ಞರ ಸಭೆ ಕರೆದು ಅಗತ್ಯ ಮಾಹಿತಿಯನ್ನು ತಾಂತ್ರಿಕ ಸಮಿತಿಗೆ ಒದಗಿಸಲಾಗುವುದು ಎಂದು ಮಾಜಿ ಸಚಿವ ಎಂ.ಎಸ್. ಆತ್ಮಾನಂದ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಆರಂಭಿಸಲು ನಿರ್ಧರಿಸಿರುವ ಸರ್ಕಾರ ತಾಂತ್ರಿಕ ಸಮಿತಿಯಿಂದ ಪರಿಶೀಲನೆ ನಡೆಸಿ ವರದಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಅಷ್ಟರಲ್ಲಿ ನಾವೂ ಸಹ ಮೈಶುಗರ್ಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿ ತಾಂತ್ರಿಕ ಸಮಿತಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಕಳೆದ ಅ. 18ರಂದು ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಅವರೂ ಸಹ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮೈಶುಗರ್ನಲ್ಲಿ ಸಕ್ಕರೆಯನ್ನೇ ಉಪ ಉತ್ಪನ್ನವನ್ನಾಗಿಸಿ, ಯಥನಾಲ್ ಹಾಗೂ ವಿದ್ಯುತ್ ತಯಾರಿಕೆಯನ್ನೇ ಮುಖ್ಯ ಉತ್ಪನ್ನವಾಗಿ ಮಾರ್ಪಡಿಸಿಕೊಂಡಲ್ಲಿ ಕಾರ್ಖಾನೆಯನ್ನು ಲಾಭದಾಕಯ ಸ್ಥಿತಿಗೆ ತರಬಹುದು ಎಂದು ಅಭಿಪ್ರಾಯ ನೀಡಿದರು ಎಂದರು.