ನೀತಿ ಆಯೋಗ ಸಭೆಗೆ ತೆಲಂಗಾಣ, ಬಿಹಾರ ಮುಖ್ಯಮಂತ್ರಿಗಳ ಗೈರು ಹಾಜರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ನೀತಿ ಆಯೋಗದ ಏಳನೇ ಆಡಳಿತ ಮಂಡಳಿ ಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊರಗುಳಿದು ಚರ್ಚೆಗೆ ಗ್ರಾಸವಾಗಿದ್ದಾರೆ.

ತೆಲಂಗಾಣ ಸೇರಿದಂತೆ ರಾಜ್ಯಗಳ ವಿರುದ್ಧ ಕೇಂದ್ರ ತೀವ್ರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದ ಕೆ. ಚಂದ್ರಶೇಖರ್ ರಾವ್, ಇದರ ವಿರುದ್ಧ ಪ್ರತಿಭಟನೆಯಾಗಿ ತಾವು ಸಭೆಗೆ ಗೈರಾಗುತ್ತಿದ್ದೇನೆ ಎಂದು ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರೆ ಇತ್ತ ಕೋವಿಡ್‌ನಿಂದ ಈಗಷ್ಟೇ ಚೇತರಿಸಿಕೊಂಡಿರುವ ನಿತೀಶ್ ಕುಮಾರ್, ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಪ್ರಧಾನಿ ನೇತೃತ್ವದ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ.
ಇದರ ನಡುವೆಯೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮಲ್ಲಿನ ಕೆಲವೊಂದು ಯೋಜನೆಗಳು, ಎದುರಿಸುತ್ತಿರುವ ಸಮಸ್ಯೆಗಳು ಮೊದಲಾದವುಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಕಲ್ಲಿದ್ದಲು ಸಹಿತ ಪ್ರಮುಖ ಖನಿಜಗಳ ಮೇಲಿನ ರಾಯಲ್ಟಿ ದರ ಪರಿಷ್ಕರಿಸಲು, ನೌಕರರ ಹಿತದೃಷ್ಟಿಯಿಂದ ಹೊಸ ಪಿಂಚಣಿ ಯೋಜನೆಯಲ್ಲಿನ ಠೇವಣಿ ಮರುಪಾವತಿಸಲು ಒತ್ತಾಯಿಸಿದರು.

ಒಡಿಶಾ ಸಿಎಂ ನವೀನ್ ಪಟ್ನಾಯಕ್, ಪ್ರಾಕೃತಿಕ ವಿಕೋಪದಿಂದ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು ಎಂದು ಕೋರಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಬೆಳೆಗಳ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ ವಿಷಯವನ್ನು ಪ್ರಸ್ತಾಪಿಸಿದರು.
ರಾಷ್ಟ್ರ ರಾಜಧಾನಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ನೀತಿ ಆಯೋಗದ ಏಳನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ.
ಇದು 2019ರ ಜುಲೈ ನಂತರ ಸದಸ್ಯರ ಖುದ್ದು ಹಾಜರಿಯಲ್ಲಿ ಜರುಗುತ್ತಿರುವ ಮೊದಲ ಆಡಳಿತ ಮಂಡಳಿ ಸಭೆಯಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಸಭೆಯನ್ನು 2020ರಲ್ಲಿ ನಡೆಸಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!