ಹೊಸದಿಗಂತ ಡಿಜಿಟಲ್ ಡೆಸ್ಕ್
ವಾರಣಾಸಿ: ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯು ಭಾರತಕ್ಕೆ ನಿರ್ಣಾಯಕ ದಿಕ್ಕನ್ನು ನೀಡುತ್ತದೆ. ಉಜ್ವಲ ಭವಿಷ್ಯಕ್ಕೆ ಕಾರಣವಾಗುತ್ತದೆ. ಆಲೋಚನೆ, ಸಂಕಲ್ಪ ಇದ್ದರೆ ಯಾವುದೂ ಅಸಾಧ್ಯವಲ್ಲ. ಈ ಸಂಕೀರ್ಣವು ನಮ್ಮ ಸಾಮರ್ಥ್ಯಕ್ಕೆ, ನಮ್ಮ ಕರ್ತವ್ಯಕ್ಕೆ ಸಾಕ್ಷಿಯಾಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ನವ ಭಾರತ ಎತ್ತ ಕಡೆ ಸಾಗುತ್ತಿದೆ ಎಂದು ವಿವರಿಸಿದ್ದಾರೆ.
* ಇಂದಿನ ಭಾರತವು ಸೋಮನಾಥ ದೇವಾಲಯವನ್ನು ಸುಂದರಗೊಳಿಸುವುದಲ್ಲದೆ, ಸಮುದ್ರದಲ್ಲಿ ಸಾವಿರಾರು ಕಿಲೋಮೀಟರ್ ಆಪ್ಟಿಕಲ್ ಫೈಬರ್ ಅನ್ನು ಹಾಕುತ್ತಿದೆ.
* ಇಂದಿನ ಭಾರತವು ಕೇವಲ ಕೇದಾರನಾಥ ದೇವಾಲಯವನ್ನಷ್ಟೇ ಜೀರ್ಣೋದ್ಧಾರ ಮಾಡುತ್ತಿಲ್ಲ, ಭಾರತೀಯರನ್ನು ತನ್ನ ಸ್ವಂತ ಬಲದಿಂದ ಬಾಹ್ಯಾಕಾಶಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದೆ.
* ಇಂದಿನ ಭಾರತವು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೇವಾಲಯವನ್ನು ನಿರ್ಮಿಸುವುದು ಮಾತ್ರವಲ್ಲದೆ, ದೇಶದ ಪ್ರತಿಯೊಂದು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಿದೆ.
* ಇಂದಿನ ಭಾರತ, ವಿಶ್ವನಾಥ ಧಾಮಕ್ಕೆ ವೈಭವದ ನೋಟ ನೀಡುವುದು ಮಾತ್ರವಲ್ಲದೇ ಬಡವರಿಗಾಗಿ ಕೋಟಿಗಟ್ಟಲೆ ಪಕ್ಕಾ ಮನೆಗಳನ್ನು ನಿರ್ಮಿಸುತ್ತಿದೆ.
ಕೇರಳದ ಗುರುವಾಯೂರು ದೇವಸ್ಥಾನ ಅಥವಾ ತಮಿಳುನಾಡಿನ ಕಾಂಚೀಪುರಂ-ವೆಲಂಕಣಿ, ತೆಲಂಗಾಣದ ಜೋಗುಲಾಂಬಾ ದೇವಿ ದೇವಸ್ಥಾನ ಅಥವಾ ಬಂಗಾಳದ ಬೇಲೂರು ಮಠ, ಗುಜರಾತ್ನ ದ್ವಾರಕಾ ಜಿ ಅಥವಾ ಅರುಣಾಚಲ ಪ್ರದೇಶದ ಪರಶುರಾಮ ಕುಂಡ್, ದೇಶದ ವಿವಿಧ ರಾಜ್ಯಗಳಲ್ಲಿ ನಮ್ಮ ನಂಬಿಕೆ ಮತ್ತು ಸಂಸ್ಕೃತಿಯ ಕೆಲಸ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ಅನೇಕ ಪವಿತ್ರ ಸ್ಥಳಗಳ ಮೇಲೆ ಸಂಪೂರ್ಣ ಭಕ್ತಿಯಿಂದ ಕೆಲಸ ನಡೆಯುತ್ತಿದೆ.
ಇಂದಿನ ಭಾರತ ತನ್ನ ಕಳೆದುಹೋದ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತಿದೆ. ಕಾಶಿಯಲ್ಲಿ ಅನ್ನಪೂರ್ಣ ಮಾತೆಯೇ ನೆಲೆಸಿದ್ದಾಳೆ. ಕಾಶಿಯಿಂದ ಕಳವು ಆಗಿದ್ದ ಅನ್ನಪೂರ್ಣ ಮಾತೆಯ ಮೂರ್ತಿಯನ್ನು ನೂರು ವರ್ಷಗಳ ಬಳಿಕ ಇದೀಗ ಕಾಶಿಯಲ್ಲಿ ಪುನರ್ ಪ್ರತಿಷ್ಠಾಪಿಸಿರುವುದು ಸಂತಸ ತಂದಿದೆ.