ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಕುಶಾಲನಗರ:
ಹಾರಂಗಿ ಅಣೆಕಟ್ಟೆಯಲ್ಲಿ ತುಂಬಿರುವ ಹೂಳೆತ್ತುವ ಹಾಗೂ ಮಾದಾಪುರ, ಹಟ್ಟಿಹೊಳೆಗಳಲ್ಲಿ ಅಲ್ಲಲ್ಲಿ ತಡೆಗೋಡೆ ನಿರ್ಮಿಸುವ 130ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಸಾಕಷ್ಟು ಹೂಳು ತುಂಬಿದ್ದು, ಈ ವಿಷಯದ ಬಗ್ಗೆ ಕ್ಷೇತ್ರದ ಶಾಸಕರು ಅನೇಕ ಬಾರಿ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದಾರೆ. ಪರಿಣಾಮವಾಗಿ ಹಾರಂಗಿ ಅಣೆಕಟ್ಟೆಯ ಹೂಳು ಎತ್ತುವಿಕೆಗೆ ಈಗಾಗಲೇ ಸರಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಸೋಮಣ್ಣ ನುಡಿದರು.
ಕಾವೇರಿ ನಿಗಮದ ಮೂಲಕ ಈಗಾಗಲೇ ರಾಜ್ಯ ಮಟ್ಟದಲ್ಲಿ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಟೆಂಡರ್ ನಲ್ಲಿ ಭಾಗವಹಿಸಿದ್ದ ಟೆಂಡರ್ ದಾರರು ಷರತ್ತುಗಳನ್ನು ಪೂರ್ಣಗೊಳಿಸದ ಕಾರಣ ಅವರುಗಳ ಟೆಂಡರ್ ನ್ನು ರದ್ದು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿಗಮದ ಮೂಲಕ ಮೂರನೆಯ ಟೆಂಡರ್ ಕರೆಯಲಾಗುವುದು.ಅದರ ಮೂಲಕ ಕ್ಷೇತ್ರದ ಶಾಸಕರ ಸಲಹೆಯಂತೆ ಹಾರಂಗಿ ಅಣೆಕಟ್ಟೆಯ ಹೂಳು ಮತ್ತು ಇತರೆ ತಡೆಗೊಡೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಈಗಾಗಲೇ 130 ಕೋಟಿ ವೆಚ್ಚದಲ್ಲಿ ಹಾರಂಗಿ ಅಣೆಕಟ್ಟೆಯ ಹಿಂದಿನ ಹೂಳು ಮತ್ತು ಮಾದಾಪುರ ಹಟ್ಟಿಹೊಳೆವರಗೆ ಕೆಲ ಭಾಗಗಳಲ್ಲಿ ತಡೆಗೋಡೆ ಸೇರಿದಂತೆ ಅನೇಕ ಕಾಮಗಾರಿ ನಡೆಯಬೇಕಾಗಿದೆ ಈಗಾಗಲೇ ನೀರಾವರಿ ಸಚಿವರು ಒಪ್ಪಿಗೆ ನೀಡಿ ಟೆಂಡರ್ ಕರೆಯಲು ಸೂಚನೆ ನೀಡಿದ್ದಾರೆ. ಅದರಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾರ್ಯೊನ್ಮುಖರಾಗಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.
ಈ ಸಂದರ್ಭ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಪಿರಿಯಾಪಟ್ಟಣ ಶಾಸಕ ಮಹದೇವ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ , ಗೋಪಾಲ ಸ್ವಾಮಿ, ಕುಶಾಲನಗರ ಪಟ್ಟಣ ಪಂಚಾಯತ್ ಅಧ್ಯಕ್ಷ ಜೈವರ್ಧನ್, ಮೂಡಾ ಅಧ್ಯಕ್ಷ ಎಂ. ಎಂ. ಚರಣ್ , ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಘಟಕದ ಪದಾಧಿಕಾರಿಗಳು ಸೇರಿದಂತೆ ಅನೇಕ ಬಿ ಜೆ ಪಿ ಬೆಂಬಲಿತ ಗ್ರಾಮ ಪಂಚಾತ್ ಸದಸ್ಯರು ಹಾಜರಿದ್ದರು.