ಸಿಂಗಾಪೂರ್‌ ಟು ಥಾಯ್ಲೆಂಡ್:‌ ರಾಜಪಕ್ಸೆ ತಲೆಮರೆಸಿಕೊಳ್ಳಲು ಥಾಯ್ ಸರ್ಕಾರ ತಾತ್ಕಾಲಿಕ ಅನುಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನರ ಕೆಂಗಣ್ಣಿಗೆ ಗುರಿಯಾಗಿ ಶ್ರೀಲಂಕಾದಿಂದ ಪಲಾಯನ ಮಾಡಿದ ದೇಶದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ತಲೆಮರೆಸಿಕೊಳ್ಳಲು ಥಾಯ್ಲೆಂಡ್‌ ಷರತ್ತುಬದ್ಧ ತಾತ್ಕಾಲಿಕ ಅನುಮತಿ ನೀಡಿದೆ. ಸುಮಾರು ಒಂದು ತಿಂಗಳಿನಿಂದ ಹಲವು ದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದ ರಾಜಪಕ್ಸೆ ಸಿಂಗಾಪುರದಲ್ಲಿ ತಲೆಮರೆಸಿಕೊಂಡಿದ್ದರು. ಇಂದಿಗೆ (ಗುರುವಾರ) ಅವರ ವೀಸಾ ಅವಧಿ ಮುಕ್ತಾಯವಾಗಲಿದೆ. ಹಾಗಾಗಿ ಸಿಂಗಾಪುರದಿಂದ ಥಾಯ್ಲೆಂಡ್‌ಗೆ ಬರಲಿದ್ದಾರೆ. ಈ ಕುರಿತು ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಮಾತನಾಡಿ, ದೇಶಭ್ರಷ್ಟ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರಿಗೆ ತಾತ್ಕಾಲಿಕವಾಗಿ ದೇಶದಲ್ಲಿ ಉಳಿಯಲು ಥಾಯ್ಲೆಂಡ್ ಅನುಮತಿ ನೀಡಿದೆ. ಥೈಲ್ಯಾಂಡ್‌ಗೆ ಬಂದಿಳಿದ ನಂತರ ಶಾಶ್ವತ ಆಶ್ರಯ ಪಡೆಯಲು ಬೇರೆ ದೇಶವನ್ನು ಅವರು ಹುಡುಕುತ್ತಾರೆಂದು ತಿಳಿಸಿದ್ದಾರೆ.

ರಾಜಪಕ್ಸೆ ಅವರನ್ನು ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವುದು ತಾತ್ಕಾಲಿಕವಾಗಿಯಾದರೂ ಮಾನವೀಯ ಸಮಸ್ಯೆಯಾಗಿದೆ ಎಂದು ಥಾಯ್ಲೆಂಡ್ ಪ್ರಧಾನಿ ಹೇಳಿದ್ದಾರೆ. ಇದು ತಾತ್ಕಾಲಿಕ ವಾಸ್ತವ್ಯವಷ್ಟೇ, ಆದರೆ ರಾಜಪಕ್ಸೆ ಇಲ್ಲಿದ್ದಾಗ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಿಡುವುದಿಲ್ಲ. ಥಾಯ್ಲೆಂಡ್‌ನಲ್ಲಿ ಉಳಿದುಕೊಂಡಿರುವಾಗ, ಶಾಶ್ವತ ಆಶ್ರಯಕ್ಕಾಗಿ ಇತರ ದೇಶಗಳನ್ನು ಹುಡುಕುವುದು ಅವರಿಗೆ ಉಪಯುಕ್ತವಾಗಿದೆ ಎಂದು ಚಾನ್-ಒ-ಚಾ ಹೇಳಿದ್ದಾರೆಂದು ಬ್ಯಾಂಕಾಕ್ ಪೋಸ್ಟ್ ಪತ್ರಿಕೆ ಉಲ್ಲೇಖಿಸಿದೆ.

ರಾಜಪಕ್ಸೆ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ ಕಾರಣ ಥಾಯ್ಲೆಂಡ್‌ನಲ್ಲಿ 90 ದಿನಗಳ ಕಾಲ ಇರಬಹುದು ಎಂದು ಥಾಯ್ ವಿದೇಶಾಂಗ ಸಚಿವ ಡಾನ್ ಪ್ರಮುದ್ವಿನೈ ಹೇಳಿದ್ದಾರೆ. ರಾಜಪಕ್ಸೆ ಅವರ ಥಾಯ್ಲೆಂಡ್ ಭೇಟಿಗೆ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ನೇತೃತ್ವದ ಶ್ರೀಲಂಕಾ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಥಾಯ್ಲೆಂಡ್ ವಿದೇಶಾಂಗ ಸಚಿವರು ಹೇಳಿದ್ದಾರೆ. ಆದರೆ ರಾಜಪಕ್ಸೆ ಅವರ ವಾಸ್ತವ್ಯಕ್ಕೆ ಥಾಯ್ ಸರ್ಕಾರ ಯಾವುದೇ ವ್ಯವಸ್ಥೆ ಮಾಡುವುದಿಲ್ಲ ಮತ್ತು ಅವರು ತಮ್ಮದೇ ಆದ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ಷರತ್ತು ಬದ್ಧ ಆಶ್ರಯ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!