ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ವರದಿ, ಕೋಲಾರ:
ಇಸ್ರೇಲ್ ದೇಶದಿಂದ ಕೊಡುಗೆಯಾಗಿ ನೀಡಿದ್ದ ೫೦೦ ಎಲ್ಪಿಎಂ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ರಾತ್ರೋರಾತ್ರಿ ಬೇರೆಗೆ ಸ್ಥಳಾಂತರವಾಗುವುದನ್ನು ತಪ್ಪಿಸಿ ಜಿಲ್ಲೆಯಲ್ಲೇ ಉಳಿಸಿಕೊಳ್ಳುವಲ್ಲಿ ಸಂಸದ ಮುನಿಸ್ವಾಮಿ ನಡೆಸಿದ ಪ್ರಯತ್ನ ಫಲ ನೀಡಿದೆ.
ಇಸ್ರೇಲ್ ದೇಶ ಭಾರತಕ್ಕೆ ಇಂತಹ ಮುರು ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನೀಡಿದ್ದು, ಅದರಲ್ಲಿ ಒಂದು ಉತ್ತರ ಪ್ರದೇಶದ ವಾರಣಾಸಿ, ಮತ್ತೊಂದು ಮೈಸೂರಿನ ಹೆಚ್ಡಿಕೋಟೆ ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಒಂದನ್ನು ತೆರೆಯಲು ಆದೇಶ ನೀಡಲಾಗಿತ್ತು.
ಈ ಸಂಬಂಧ ರಾಜ್ಯ ಸರ್ಕಾರದಿಂದ ಘಟಕ ಬರುತ್ತಿರುವ ಸೂಚನೆಗಳ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ನಡೆಸಿತ್ತು. ಜತೆಗೆ ಆಕ್ಸಿಜನ್ ಕೊರತೆ ಎದುರಿಸುತ್ತಿದ್ದ ಜಿಲ್ಲೆಯ ಜನತೆಗೆ ಇದು ಖುಷಿ ತಂದಿತ್ತು.
ಆದರೆ ಇದ್ದಕ್ಕಿದ್ದಂತೆ ಕೆಜಿಎಫ್ಗೆ ಮಂಜೂರಾಗಿದ್ದ ಆಕ್ಸಿಜನ್ ಪ್ಲಾಂಟ್ ತುಮಕೂರಿಗೆ ಸ್ಥಳಾಂತರವಾಗಿದೆ ಎಂಬ ಸುದ್ದಿಗಳು ಜಿಲ್ಲೆಯ ಜನರ ಆಕ್ರೋಶಕ್ಕೂ ಕಾರಣವಾಗಿ, ಕೋಲಾರ ನತದೃಷ್ಟ ಜಿಲ್ಲೆ ಎಂಬ ನೋವಿನ ಮಾತುಗಳು ಕೇಳಿ ಬಂದಿದ್ದವು ಮತ್ತು ಈ ಸಂಬಂಧ ಮುನಿಸ್ವಾಮಿ ಪ್ರತಿಕ್ರಿಯಿಸಿ ಕೊನೆ ಘಳಿಗೆಯಲ್ಲಿ ತುಮಕೂರಿಗೆ ಘಟಕ ಸ್ಥಳಾಂತರದ ಸುದ್ದಿಯಿಂದ ನನಗೂ ಅಸಮಾಧಾನವಾಗಿದೆ ಎಂದು ತಿಳಿಸಿದ್ದರು.
ಜತೆಗೆ ತುಮಕೂರಿನಲ್ಲಿ ಕೋವಿಡ್ಸೋಂಕು ತೀವ್ರವಾಗಿದೆ ಮತ್ತು ಸಾವುನೋವಿನ ಪ್ರಮಾಣ ಅಲ್ಲಿ ಹೆಚ್ಚಾಗಿರುವುದರಿಂದ ಕೋಲಾರದಿಂದ ಆಕ್ಸಿಜನ್ ಘಟಕ ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂಬ ಸಮಜಾಯಿಷಿಯೂ ಉನ್ನತ ಮೂಲಗಳಿಂದ ಸಿಕ್ಕಿತು.
ಮುನಿಸ್ವಾಮಿ ಪ್ರಯತ್ನ ಕೊನೆಗೂ ಫಲಿಸಿತು
ಕೂಡಲೇ ಕಾರ್ಯೋನ್ಮುಖರಾದ ಸಂಸದ ಮುನಿಸ್ವಾಮಿ ಈ ಸಂಬಂಧ ಭಾರತದ ಆರೋಗ್ಯ ಸಚಿವ ಹರ್ಷವರ್ಧನ್, ಕೇಂದ್ರ ಸಚಿವ ಪ್ರಹ್ಲಾದ್ಜೋಷಿರನ್ನು ಸಂಪರ್ಕಿಸಿ ಅವರಿಗೆ ಸಮಸ್ಯೆಯ ಮನದಟ್ಟು ಮಾಡಿ ಘಟಕ ಕೋಲಾರ ಜಿಲ್ಲೆಗೆ ನೀಡುವಂತೆ ಮನವೊಲಿಸಿದರು.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಅಶ್ವಥ್ಥನಾರಾಯಣ, ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್, ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೂ ಪತ್ರ ಮುಖೇನ ಹಾಗೂ ದೂರವಾಣಿ ಮೂಲಕ ಮಾತನಾಡಿ ಒತ್ತಡ ಹಾಕಿದರು.
ಕೊನೆಗೂ ಸಂಸದ ಮುನಿಸ್ವಾಮಿ ಅವರ ಎಲ್ಲಾ ಪ್ರಯತ್ನಗಳಿಗೂ ಫಲ ಸಿಕ್ಕಿದ್ದು, ಇಸ್ರೇಲ್ ಕೊಡುಗೆಯಾಗಿ ನೀಡಿರುವ ಆಕ್ಸಿಜನ್ ಘಟಕ ಮತ್ತೆ ಕೋಲಾರಕ್ಕೆ ಬರುವಂತಾಯಿತು.
ಆಕ್ಸಿಜನ್ ಘಟಕದೊಂದಿಗೆ ಬಂದ ಕೇಂದ್ರದ ಅಧಿಕಾರಿಗಳು ಸಂಸದ ಮುನಿಸ್ವಾಮಿ ಸಮ್ಮುಖದಲ್ಲಿ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ಹಸ್ತಂತರಿಸಿದರು.
ಪ್ರಧಾನ ಮಂತ್ರಿಗಳಿಗೆ ಸಂಸದರ ಧನ್ಯವಾದ
ಜಿಲ್ಲೆಯಲ್ಲಿ ಕೋವಿಡ್-೧೯ ಹೆಚ್ಚುತ್ತಿರುವುದರಿಂದ ಜನರ ಕಷ್ಟಗಳನ್ನು ಸ್ಪಂದಿಸಿ ಇಂದು ಇಸ್ರೇಲ್ ನಿಂದ ಮೊಟ್ಟ ಮೊದಲ ಬಾರಿಗೆ ಬಂದ ಆಕ್ಸಿಜನ್ ಪ್ಲಾಂಟ್ ಅನ್ನು ಕೆ.ಜಿ.ಎಫ್ ನಲ್ಲಿ ಸ್ಥಾಪನೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವರಾದ ಡಾ.ಹರ್ಷವರ್ಧನ್, ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೆ ಸಂಸದ ಮುನಿಸ್ವಾಮಿ ಧನ್ಯವಾದ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲೇ ಘಟಕ ಉಳಿಯಲು ಕಾರಣರಾದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ. ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೂ ಕೋಲಾರ ಲೋಕಸಭಾ ಕ್ಷೇತ್ರದ ಜನತೆ ಪರವಾಗಿ ಧನ್ಯವಾದ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.