Tuesday, June 28, 2022

Latest Posts

ಬಡವರ ಬಿಪಿಎಲ್ ಕಾರ್ಡ್ ರದ್ದು: ಮಡಿಕೇರಿ ಮಹಿಳಾ ಕಾಂಗ್ರೆಸ್ ಅಸಮಾಧಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮಡಿಕೇರಿ:

ವಾಹನ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಬಡ ವರ್ಗದ ಬಿಪಿಎಲ್ ಕಾಡ್೯ಗಳನ್ನು ಆಹಾರ ಇಲಾಖೆ ರದ್ದು ಮಾಡುತ್ತಿದೆ ಎಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಅವರು, ತಕ್ಷಣ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೆಲಸಕ್ಕೆ ತೆರಳಲು ಪ್ರತಿಯೊಬ್ಬರೂ ವಾಹನ ಹೊಂದುವುದು ಅನಿವಾರ್ಯವಾಗಿದೆ. ಕೂಲಿ ಕಾರ್ಮಿಕರು ಹಾಗೂ ಬಡವರು ಹಳೆಯ ದ್ವಿಚಕ್ರ ವಾಹನ ಅಥವಾ ಅತ್ಯಂತ ಕಡಿಮೆ ಮೌಲ್ಯದ ಹಳೆಯ ಕಾರುಗಳನ್ನು ಹೊಂದಿರುವುದು ಸಹಜ. ಆದರೆ ಇದನ್ನೇ ನೆಪ ಮಾಡಿಕೊಂಡು ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಗಳನ್ನು ಅನರ್ಹಗೊಳಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ನಿತ್ಯ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿರುವ ಸರ್ಕಾರ ಇದೀಗ ಬಿಪಿಎಲ್ ಕಾರ್ಡ್ ಗಳನ್ನು ಕೂಡ ರದ್ದು ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಟೀಕಿಸಿದ್ದಾರೆ.
ಎಲ್ಲಾ ವಸ್ತುಗಳ ಬೆಲೆ ಏರಿಕೆಯ ನಡುವೆಯೇ ಆದಾಯವೂ ಕುಂಠಿತವಾಗುತ್ತಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದಾಗಿ ನಿತ್ಯ ದುಡಿದು ತಿನ್ನುವವರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ವರ್ತಕರು, ರೈತರು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಜೀವನ ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟ ಎದುರಾದಾಗ ಸರ್ಕಾರಗಳು ನೆರವಿಗೆ ಬರಬೇಕೇ ಹೊರತು ಇರುವ ಕನಿಷ್ಟ ಸೌಲಭ್ಯವನ್ನು ಕೂಡ ಕಸಿದುಕೊಳ್ಳುವುದಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸರ್ಕಾರ ಜಾಣ ಮೌನಕ್ಕೆ ಶರಣಾಗಿದೆ ಎಂದು ಫ್ಯಾನ್ಸಿ ಪಾರ್ವತಿ ಆರೋಪಿಸಿದ್ದಾರೆ.
ಆಹಾರ ಇಲಾಖೆ ಅವೈಜ್ಞಾನಿಕ ಮಾನದಂಡದಡಿ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿರುವ ಅವರು, ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರ ಸಂಖ್ಯೆಯೇ ಹೆಚ್ಚು ಇದ್ದು, ಸರ್ಕಾರ ಬಿಪಿಎಲ್ ಕಾರ್ಡ್ ಗಳನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಬಾರದು. ಸರ್ಕಾರಕ್ಕೆ ಜಿಲ್ಲೆಯ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬೆಟ್ಟಗುಡ್ಡ ಪ್ರದೇಶವೆಂದು ವಿಶೇಷವಾಗಿ ಪರಿಗಣಿಸಿ ಎಪಿಎಲ್ ಕಾರ್ಡುದಾರರಿಗೂ ಹೆಚ್ಚಿನ ಪಡಿತರ ಸೌಲಭ್ಯಗಳನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss