ಸಚಿವ ಸಂಪುಟ ವಿಸ್ತರಣೆ ಮಾಡುವುದು, ಸಚಿವರನ್ನು ಕೈ ಬಿಡುವುದು ಸಿಎಂ ಪರಮಾಧಿಕಾರ: ಭೈರತಿ

ಹೊಸ ದಿಗಂತ ವರದಿ, ದಾವಣಗೆರೆ:

ಸಚಿವ ಸಂಪುಟ ವಿಸ್ತರಣೆ ಮಾಡುವುದು, ಸಂಪುಟದಿಂದ ಸಚಿವರನ್ನು ಕೈ ಬಿಡುವುದು ಸಿಎಂ ಪರಮಾಧಿಕಾರ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಜಿಲ್ಲೆಯ ಚನ್ನಗಿರಿ ತಾಲೂಕು ಮೆದಿಕೆರೆ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಸಲುವಾಗಿ ದೆಹಲಿಗೆ ತೆರಳಿದ್ದಾರೆ. ಅಲ್ಲಿಂದ ಏನು ಸಂದೇಶ ಹೊತ್ತು ತರುತ್ತಾರೋ ಗೊತ್ತಿಲ್ಲ. ಆದರೆ ನಾವಂತೂ ಅವರ ತೀರ್ಮಾನಕ್ಕೆ ಬದ್ಧ. ಸಂಪುಟದಿಂದ ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಸಚಿವ ಸ್ಥಾನ ಹಿಂಪಡೆದರೆ ಏನು ಮಾಡಲು ಸಾಧ್ಯ? ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇವೆ ಎಂದರು.
ಸಂಪುಟದಿಂದ ಯಾರನ್ನು ಕೈಬಿಡುತ್ತಾರೆಂಬುದು ಗೊತ್ತಿಲ್ಲ. ವಲಸೆ ಬಂದಂತಹ ಎಂ.ಟಿ.ನಾಗರಾಜರನ್ನು ಸಚಿವ ಸ್ಥಾನದಿಂದ ಕೈಬಿಡುತ್ತಾರೆಂದು ಹೇಳುವವರಿಗೆ ಬುದ್ಧಿ ಇಲ್ಲ. ವಲಸೆ ಬಂದ ಸಚಿವರ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೆಲ್ಲಾ ನಡೆದಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಪುನರುಚ್ಛರಿಸಿದರು.
ಜಿಲ್ಲೆಯ ಚನ್ನಗಿರಿ ತಾಲೂಕು ಸಿದ್ದನಮಠ, ಮೆದಿಕೆರೆ ಗ್ರಾಮಗಳಲ್ಲಿ ಭತ್ತದ ಬೆಳೆ ಸಾಕಷ್ಟು ಹಾನಿಗೀಡಾಗಿದೆ. ಜಿಲ್ಲೆಯ ಬೇರೆ ಭಾಗದಲ್ಲೂ ಸಾಕಷ್ಟು ಆಸ್ತಿಪಾಸ್ತಿ, ಬೆಳೆ ಹಾನಿ ಸಂಭವಿಸಿದೆ. ಮಳೆಯಿಂದಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಮಾವು ಬೆಳೆಗಾರರು ಸಹ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!