ಹೊಸ ದಿಗಂತ ವರದಿ, ಸೋಮವಾರಪೇಟೆ:
ಕಾರನ್ನು ಅಡ್ಡಗಟ್ಟಿ ವ್ಯಕ್ತಿ ಮೇಲೆ ಕೊಲೆ ಯತ್ನ ನಡೆಸಿರುವ ಘಟನೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣ ಸಮೀಪದ ಆಂಜನೇಯ ದೇವಾಲಯ ಬಳಿಯ ನಿವಾಸಿ ಸಂಪತ್ಕುಮಾರ್ ಎಂಬವರ ಮೇಲೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ವಿ. ಮಿಥುನ್, ಪಟ್ಟಣದ ನಿವಾಸಿ ಕಿರಣ್ ಸೇರಿದಂತೆ ಇತರರು ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಪಟ್ಟಣ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 341, 323, 324, 506, 307, 427 ಅನ್ವಯ ಮೊಕದ್ದಮೆ ದಾಖಲಾಗಿದೆ.
ಸಂಪತ್ ಅವರು ತಮ್ಮ ಕಾರಿನಲ್ಲಿ ಹಾನಗಲ್ಲು ಗಣಪತಿ ದೇವಾಲಯ ಸಮೀಪ ತೆರಳುತ್ತಿದ್ದ ಸಂದರ್ಭ ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜನ್ನು ಪುಡಿಗೈದು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಹಾನಗಲ್ಲು ಗ್ರಾಮದಿಂದ ಪಟ್ಟಣಕ್ಕೆ ಹಿಂತಿರುಗುತ್ತಿದ್ದ ಸಂದರ್ಭ ಗಣಪತಿ ದೇವಾಲಯದ ಬಳಿ ರಸ್ತೆ ತಡೆದು ಮಿಥುನ್, ಕಿರಣ್
ಸೇರಿದಂತೆ ಇತರರು, ಕಾರಿನ ಕಿಟಕಿ ಒಡೆದು ಬಲವಂತವಾಗಿ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಮಿಥುನ್ ತನ್ನ ಕೈಲಿದ್ದ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಲು ಮುಂದಾದ ಸಂದರ್ಭ ತಡೆದ ಹಿನ್ನೆಲೆ ಬಲಗೈಗೆ ಗಾಯವಾಗಿದೆ ಎಂದು ಸಂಪತ್ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಮಿಥುನ್, ಕಿರಣ್ ಸೇರಿದಂತೆ ಇತರರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಅವರು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.