ಹೊಸದಿಗಂತ ವರದಿ ಮಂಡ್ಯ:
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಧರಣಿ ಸತ್ಯಾಗ್ರಹ 77 ದಿನಕ್ಕೆ ಕಾಲಿಟ್ಟಿದ್ದು, ಇಂದೂ ಸಹ ಮುಂದುವರಿಯಿತು.
ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಸರ್ ಎಂ.ವಿ. ಪ್ರತಿಮೆ ಎದುರು ನಿರಂತರ ಧರಣಿಯನ್ನು ಸಮಿತಿಯ ಮುಖಂಡರು ಮುಂದುವರೆಸಿದರು. ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಸಿದೆ. ಆದರೂ ಸಹ ರಾಜ್ಯ ಸರ್ಕಾರ ರೈತರ ಹಿತ ಕಾಪಾಡಲು ಮುಂದಾಗುತ್ತಿಲ್ಲ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಇದುವರೆಗೂ ಸ್ಥಗಿತ ಮಾಡಿಲ್ಲ ಎಂದು ಹೇಳಿದರು.
ರಾಷ್ಟ್ರದಲ್ಲಿನ ಜಲವಿವಾದಗಳ ಇತ್ಯರ್ಥಕ್ಕೆ ರಾಷ್ಟ್ರೀಯ ಜಲನೀತಿ ರೂಪಿಸದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ, ರಾಷ್ಟ್ರೀಯ ಜಲನೀತಿ ರೂಪಿಸಿ ಕಾವೇರಿ ನದಿ ನೀರು ಜಲ ಹಂಚಿಕೆ ವಿಚಾರಕ್ಕೆ ಸಂಕಷ್ಟ ಸೂತ್ರ ರೂಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ನ.23ರಂದು ನವದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ, ನಿಗದಿಯಾಗಿದ್ದು, ರಾಜ್ಯ ಸರ್ಕಾರ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಮುಂದಾಗಬೇಕು. ಪ್ರಾಧಿಕಾರದ ಸದಸ್ಯರು ಕಾವೇರಿ ಕಣಿವೆ ಪ್ರದೇಶದಲ್ಲಿನ ಜಲಾಶಯಗಳ ವಾಸ್ತವ ಸ್ಥಿತಿ ಅರಿಯಬೇಕು ಎಂದು ಹೇಳಿದರು.