ಮಂಗಳೂರು ನಿವಾಸಿಗಳ ನಿದ್ದೆಗೆಡಿಸಿದ ‘ಚಡ್ಡಿ ಗ್ಯಾಂಗ್’ ಕೊನೆಗೂ ಅಂದರ್

ಹೊಸ ದಿಗಂತ ವರದಿ,ಮಂಗಳೂರು:

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ದರೋಡೆ, ಕಳ್ಳತನ ಪ್ರಕರಣದ ಖತರ್ನಾಕ್ ‘ಚಡ್ಡಿ ಗ್ಯಾಂಗ್’ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳವಾರ ನಸುಕಿನ ಜಾವ ನಗರದ ಕೋಟೆಕಣಿ ಒಂದನೇ ಕ್ರಾಸ್ ಮನೆಯೊಂದರಿಂದ ಅಪಾರ ಪ್ರಮಾಣದ ನಗ-ನಗದು ದರೋಡೆ ಮಾಡಿ ಸುಮಾರು ೧೨ ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ ೧ ಲಕ್ಷ ಮೌಲ್ಯದ ೧೦ ಬ್ರಾಂಡೆಡ್ ವಾಚ್‌ಗಳು, ೩೦೦೦ ರೂ. ನಗದು ಹಣ ಹೊತ್ತಿಯ್ದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಟೆಕಣಿಯ ವಿಕ್ಟರ್ ಮೆಂಡೋನ್ಸಾ ಹಾಗೂ ಪೆಟ್ರಿಶಿಯಾ ಎಂಬ ವೃದ್ಧದಂಪತಿ ಮನೆಯಲ್ಲಿ ದರೋಡೆ ನಡೆದಿದೆ. ಮಧ್ಯರಾತ್ರಿ ೧ಗಂಟೆ ಸುಮಾರಿಗೆ ಬಿಜೈ ದಡ್ಡಲಕಾಡು ಬಳಿಯ ಮನೆಯ ಕಿಟಕಿ ಸರಳು ಕತ್ತರಿಸಿ ನಾಲ್ವರಿದ್ದ ಕಳ್ಳರ ಗುಂಪು ಮನೆಯೊಳಗೆ ನುಗ್ಗಿದೆ. ಚಡ್ಡಿ- ಬನಿಯಾನ್ ತೊಟ್ಟಿದ್ದ ಈ ತಂಡ ಮುಖಕ್ಕೆ ಮಂಕಿಕ್ಯಾಪ್ ಧರಿಸಿತ್ತು. ಬಳಿಕ ಈ ವೃದ್ಧ ದಂಪತಿಯನ್ನು ಚಾಕುತೋರಿಸಿ ಹಲ್ಲೆ ನಡೆಸಿ ಚಿನ್ನಾಭರಣ, ಹಣ ಕೊಡುವಂತೆ ಬೆದರಿಸಿದೆ. ಈ ವೇಳೆ ದಂಪತಿ ಬೊಬ್ಬಿಟ್ಟರೂ ಹೊರಗಿನವರಿಗೆ ಕೇಳಿಸಿರಲಿಲ್ಲ. ದರೋಡೆಕೋರರು ಮನೆಯವರನ್ನು ಕಟ್ಟಿಹಾಕಿ ನಗ, ನಗದು ದರೋಡೆ ಮಾಡಿ ಮನೆಯವರ ಕಾರಿನಲ್ಲಿ ಪರಾರಿಯಾಗಿದ್ದರು.

ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಲ್ಲಿ ಇದು ಮೂರನೇ ದರೋಡೆ ಪ್ರಕರಣವಾಗಿದ್ದು, ಇದರ ಹಿಂದೆ ಕುಖ್ಯಾತ ಅಂತಾರಾಜ್ಯದ ಚಡ್ಡಿ ಗ್ಯಾಂಗ್‌ನ ಕೃತ್ಯ ಇರಬಹುದು ಎಂದು ಪೊಲೀಸರು ಅನುಮಾನಿಸಿದ್ದರು.

ಪ್ರಕರಣದ ಬೆನ್ನತ್ತಿದ್ದ ಪೊಲೀಸರು ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದರು. ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಗುಮಾನಿ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು.

ಕೆ.ಎಸ್.ಅರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಅರ್.ಟಿ.ಸಿ ಬಸ್ಸುಗಳ ಮಾಹಿತಿ ಪಡೆಯಲಾಗಿ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಒಂದು ಕೆ.ಎಸ್.ಅರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ ೪ ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿ, ಅದೇ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದರು. ಅವರ ಮಾಹಿತಿಯಂತೆ ಅದೇ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ಬಗ್ಗೆ ವಿವರ ಪಡೆದು, ಬಸ್ಸು ನಂಬ್ರ ಕೆಎ-೧೯-ಎಫ್-೩೫೭೫ರ ನಿರ್ವಾಹಕರನ್ನು ಸಂಪರ್ಕಿಸಿ ಅವರು ತಿಳಿಸಿದ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧಿಕ್ಷಕರಿಗೆ ತಿಳಿಸಲಾಗಿತ್ತು. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಯ ತಂಡ ಸಕಲೇಶಪುರ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ ೪ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿದ ಬಗ್ಗೆ ಆರೋಪಿಗಳು ಒಪ್ಪಿದ್ದು, ಅವರ ವಶದಲ್ಲಿದ್ದ ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಹಾಗೂ ಹಣವನ್ನು ವಶ ಪಡಿಸಿ ಉರ್ವ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿದ್ದಾರೆ.

ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿರುವ ನಾಲ್ವರು ಆರೋಪಿಗಳು ಮಧ್ಯಪ್ರದೇಶ ರಾಜ್ಯದವರು. ಗುಣಾ ಜಿಲ್ಲೆಯ ರಾಜು ಸಿಂಗ್ವಾನಿಯ (೨೪), ಭೂಪಾಲ್‌ನ ಮಯೂರ್ (೩೦), ಮಾಧವಗಡ್‌ನ ಬಾಲಿ (೨೨), ಗುಣಾ ಜಿಲ್ಲೆಯ ವಿಕ್ಕಿ (೨೧) ಬಂಧಿತ ಆರೋಪಿಗಳು. ಈ ಮಿಂಚಿನ ಕಾರ್ಯಾಚರಣೆಯನ್ನು ಕೃತ್ಯ ನಡೆದ ಕೇವಲ ೫ ಗಂಟೆಗಳ ಒಳಗೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಈ ಬಾರಿ ಶ್ಲಾಘನೀಯ ಪತ್ತೆ ಕಾರ್ಯ. ಯೋಜನಾಬದ್ಧ ಕಾರ್ಯ ಶೈಲಿ.ಬಹುಶಃ ನಿನ್ನೆ ಕಳ್ಳರು ಬಹಳ ಪ್ರಭಾವಿ ವ್ಯಕ್ತಿಗಳ(ರಾಜಕೀಯ ವ್ಯಕ್ತಿಗಳ ಸಮೀಪ ಸಂಬಂಧಿಗಳು,
    ಅಥವಾ ಆತ್ಮೀಯರ ಮನೆ ದರೋಡೆ ಮಾಡಿರಬಹುದು.
    ಹಾಗಾಗಿ ಪೋಲಿಸರು ಚುರುಕಿನ ಕಾರ್ಯಾಚರಣೆ ನಡೆಸಿ ಅಪರಾಧಿಗಳ ಬಂಧನ ನಡೆದಿದೆ.

LEAVE A REPLY

Please enter your comment!
Please enter your name here

error: Content is protected !!