ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಂಶಪರಂಪರೆ ರಾಜಕೀಯದಿಂದ ದೇಶದಾದ್ಯಂತ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಪುದುಚೇರಿ ಪ್ರವಾಸದಲ್ಲಿರುವ ಅಮಿತ್ ಷಾ ಅವರು ಇಂದು ಕಾರೈಕಲ್ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ವಿ. ನಾರಾಯಣಸ್ವಾಮಿ ಅವರು ಅಭಿವೃದ್ಧಿ ಕಡೆಗಣಿಸಿ ಕೇವಲ ಕೀಳು ರಾಜಕೀಯ ಮಾಡಿದರು. ಪುದುಚೇರಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೀಡಿದ್ದ 15 ಸಾವಿರ ಕೋಟಿ ಮೊತ್ತದಲ್ಲಿ ಅಪಾರ ಕಮಿಷನ್ ಅನ್ನು ಗಾಂಧಿ ಕುಟುಂಬಕ್ಕೆ ನೀಡಿದರು. ಜನ ಸೇವೆಗಿಂತ ದೆಹಲಿ ಗಾಂಧಿ ಕುಟುಂಬದ ಸೇವೆಯಲ್ಲೇ ನಾರಾಯಣಸ್ವಾಮಿ ಅವರು ಸಮಯ ಕಳೆದರು ಎಂದು ಶಾ ಟೀಕಿಸಿದರು.
ಈ ಬಾರಿ ಯುವ ಜನಾಂಗವು ಎನ್ಡಿಎಗೆ ಮತ ಚಲಾಯಿಸಿದರೆ ನಮ್ಮ ಸರ್ಕಾರವು ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಶಾ ಹೇಳಿದರು.
ಮುಂದಿನ ಬಾರಿ ಪುದುಚೇರಿಯಲ್ಲಿ ಎನ್ಡಿಎ ಸರ್ಕಾರ ರಚನೆ ಮಾಡಲಿದೆ. ಕೇವಲ ಪುದುಚೇರಿ ಮಾತ್ರವಲ್ಲ, ಇಡೀ ದೇಶದಲ್ಲಿ ಎನ್ಡಿಎ ಬರಲಿದೆ. ಅನೇಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ. ಏಕೆಂದರೆ ಅರ್ಹತೆಗೆ ಕಾಂಗ್ರೆಸ್ನಲ್ಲಿ ಬೆಲೆ ಇಲ್ಲ ಎಂದರು.