ಹೊಸ ದಿಗಂತ ವರದಿ, ಮಡಿಕೇರಿ:
ದಾಸ ಮತ್ತು ಶರಣರ ಸಾಹಿತ್ಯ ಕನ್ನಡ ಸಾಹಿತ್ಯ ಬೆಳವಣಿಗೆಗೆ ಅಮೋಘ ಕೊಡುಗೆ ನೀಡಿದೆ. ಇಂತಹ ದಾಸ ಸಾಹಿತ್ಯ, ಶರಣ ಸಾಹಿತ್ಯವನ್ನು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅವರು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರವಾರ ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಪ್ರಥಮ ‘ದಾಸ ಸಾಹಿತ್ಯ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ದಾಸ ಸಾಹಿತ್ಯದಲ್ಲಿ ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ದೂರದ ಯಾತ್ರೆಯಲ್ಲಿ ದಾರಿಯ ಚಿಂತೆ’, ಹೀಗೆ ಚಿಕ್ಕ ಚಿಕ್ಕ ಸಾಲಿನಲ್ಲಿಯೇ ಕೀರ್ತನೆಗಳನ್ನು ರಚಿಸಿ, ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ದಾಸರ ಕೀರ್ತನಾ ಸಾಹಿತ್ಯಗಳು ರಚನೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಕನ್ನಡ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಕಲೆಗಳ ಸಾಹಿತ್ಯ ಎಲ್ಲೆಡೆ ಪಸರಿಸಬೇಕು. ಆ ನಿಟ್ಟಿನಲ್ಲಿ ಸಾಹಿತ್ಯ ರಚನೆ ಮಾಡುವಂತಾಗಬೇಕು. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ದಾಸ ಸಾಹಿತ್ಯದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಅವರು ನುಡಿದರು.
ವಿದ್ಯೆಯಿದ್ದರೂ ವಿವೇಕವಿಲ್ಲ
ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಅವರು ಸಾಹಿತಿ ನಾಗೇಶ್ ಕಾಲೂರು ಅವರು ಬರೆದಿರುವ ಆಗಸ್ಟ್-16 ಮತ್ತು ಇತರೆ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ ‘ಹಿಂದೆ ವಿದ್ಯೆ ಇರಲಿಲ್ಲ. ಆದರೆ ವಿವೇಕ ಇತ್ತು’, ಆದರೆ ‘ಇಂದು ವಿದ್ಯೆ ಇದೆ ಆದರೆ ವಿವೇಕ ಇಲ’್ಲ, ಇದನ್ನು ಸಮಾಜದಲ್ಲಿ ಕಾಣಬಹುದಾಗಿದೆ ಎಂದು ಒತ್ತಿ ಹೇಳಿದರು.
ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳು ಪ್ರತಿಯೊಬ್ಬರನ್ನೂ ಒಟ್ಟುಗೂಡಿಸುತ್ತದೆ. ಆ ದಿಸೆಯಲ್ಲಿ ದಾಸ ಸಾಹಿತ್ಯವು ಜನ ಸಾಮಾನ್ಯರ ಮನಮುಟ್ಟುವಲ್ಲಿ ಪರಿಣಾಮಕಾರಿ ಸಾಹಿತ್ಯವಾಗಿದೆ. ಆದ್ದರಿಂದ ದಾಸ ಸಾಹಿತ್ಯವನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಅವರು ತಿಳಿಸಿದರು.
ದಾಸ ಸಾಹಿತ್ಯದಲ್ಲಿ ಸಂವೇದನಾ ಶೀಲತೆಯನ್ನು ಕಾಣಬಹುದಾಗಿದೆ. ಸಮಾಜದ ಸಾಮಾಜಿಕ ಸಮಸ್ಯೆಗಳಿಗೆ ಬೆಳಕು ಚೆಲ್ಲುವಲ್ಲಿ ದಾಸ ಸಾಹಿತ್ಯ ಪರಿಣಾಮಕಾರಿಯಾಗಿದೆ ಎಂದು ಅವರು ನುಡಿದರು.
ತಂಬೂರಿ, ಗೆಜ್ಜೆ, ವಾದ್ಯ, ತಾಳ, ಮೂಲಕ ಕೀರ್ತನೆಗಳು ಜನ ಸಾಮಾನ್ಯರಿಗೆ ಹತ್ತಿರವಾಗಿವೆ. ಪುರಂದರ ದಾಸ, ಕನಕದಾಸ, ವ್ಯಾಸರಾಯ ಹೀಗೆ ಹಲವರು ದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ, ಹಿಂದೆ ದಾಸರನ್ನು ದೇವರಂತೆ ಕಾಣುತ್ತಿದ್ದರು. ಕನ್ನಡ ಕೀರ್ತನೆಗಳನ್ನು ಹಾಡಿ ಜನರಿಗೆ ತಲುಪಿಸುತ್ತಿದ್ದರು. ಆ ದಿಸೆಯಲ್ಲಿ ಕನ್ನಡ ದಾಸ ಸಾಹಿತ್ಯವನ್ನು ಓದಬೇಕು ಎಂದು ಸಲಹೆ ಮಾಡಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ, ದಾಸ ಸಾಹಿತ್ಯದ ಕೀರ್ತನೆಗಳಲ್ಲಿ ಭಕ್ತಿಯನ್ನು ಕಾಣಬಹುದು. ನಾಗೇಶ್ ಕಾಲೂರು ಅವರು ಬರೆದಿರುವ ಕೃತಿಗಳು ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಹೊಂದಿವೆ ಎಂದು ಅವರು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿದರು.
ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಮೂರ್ನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ ಜಿ.ಮಾದಪ್ಪ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಸುಭಾಷ್ ನಾಣಯ್ಯ, ತಾ.ಪಂ. ಸದಸ್ಯ ಅಪ್ರು ರವೀಂದ್ರ, ಕಸಾಪ ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಡಾ.ಕೆ.ಸಿ.ದಯಾನಂದ, ಸಾಹಿತಿ ನಾಗೇಶ್ ಕಾಲೂರು, ಕೋಡಿ ಚಂದ್ರಶೇಖರ್, ಚಂದ್ರಮೌಳಿ, ವಿವಿಧ ಹೋಬಳಿ ಘಟಕದ ಅಧ್ಯಕ್ಷರು ಇತರರು ಇದ್ದರು.
ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ರೈತಗೀತೆ ಹಾಡಿದರು.
ಜಿ.ಪಂ. ಸದಸ್ಯೆ ಕಲಾವತಿ ಪೂವಪ್ಪ ಅವರು ಮೂರ್ನಾಡುವಿನ ಮಾರುತಿ ವಿದ್ಯಾಸಂಸ್ಥೆ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಸ್ತ್ರೀ ಶಕ್ತಿ ಗುಂಪು ಕಲಶ ಹೊತ್ತು ಸಾಗಿದರು. ಡೊಳ್ಳು ಕುಣಿತ, ಪೊಲೀಸ್ ಬ್ಯಾಂಡ್ ಮತ್ತಿತರ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಕನ್ನಡ ಸಾಹಿತ್ಯ ಪರಿಷತ್ತಿನ ಪಿ.ಪಿ.ಸುಕುಮಾರ್ ಸ್ವಾಗತಿಸಿ, ಪಿ.ಎಸ್.ರವಿಕೃಷ್ಣ ಮತ್ತು ಹೇಮಾವತಿ ನಿರೂಪಿಸಿದರು. ದೀಪಿಕಾ ವಂದಿಸಿದರು.