ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….
ಹೊಸ ದಿಗಂತ ಆನ್ ಲೈನ್ ಡೆಸ್ಕ್
ಪೆಗಾಸಸ್ ಗೂಢಚರ್ಯೆ ವಿವಾದದ ಹಿನ್ನೆಲೆಯಲ್ಲಿ ಮೋದಿ ಸರಕಾರಕ್ಕೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇಲ್ಲವೆಂದು ಬಿಂಬಿಸಲು , ತಮಿಳ್ನಾಡು ಕಾಂಗ್ರೆಸ್ ಘಟಕ ಮೋದಿಯವರಿಗೆ ಸೀರೆ , ಬಳೆಗಳನ್ನು ಕೊಡುಗೆಯಾಗಿ ನೀಡಲು ಮುಂದಾದ ಘಟನೆ ಈಗ ಕಾಂಗ್ರೆಸ್ಗೆ ತೀವ್ರ ಪೇಚುಂಟು ಮಾಡಿದೆ. ಸೀರೆ ಮತ್ತು ಬಳೆ ತೊಟ್ಟವರಿಗೆ ದೇಶ ಮುನ್ನಡೆಸಲು ಸಾಧ್ಯವಿಲ್ಲವೆಂದು ತೋರಿಸುವ ಮೂಲಕ ಕಾಂಗ್ರೆಸ್ ತನ್ನ ಸ್ತ್ರೀದ್ವೇಷಿ ನಿಲುವು ಮತ್ತು ಮಹಿಳೆಯರ ಬಗ್ಗೆ ಹೊಂದಿರುವ ಕೀಳ್ಮಟ್ಟದ ಮಾನಸಿಕತೆಯನ್ನು ಪ್ರದರ್ಶಿಸಿದೆ ಎಂಬ ಆಕ್ರೋಶ ಕೇಳಿಬಂದಿದೆ.
ತಮಿಳ್ನಾಡು ಕಾಂಗ್ರೆಸ್ ಪೆಗಾಸಸ್ ವಿವಾದವನ್ನು ಮುಂದಿಟ್ಟುಕೊಂಡು ಗುರುವಾರ ಮೋದಿ ಸರಕಾರದ ವಿರುದ್ಧ ಪ್ರತಿಭಟನೆಯೊಂದನ್ನು ಆಯೋಜಿಸಿತ್ತು. ಈ ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕರು ಮೋದಿಯವರಿಗೆ ಸೀರೆ ಮತ್ತು ಬಳೆಯನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದಿದ್ದರು. ಪ್ರದರ್ಶನದಲ್ಲಿ ಸೀರೆ, ಬಳೆಗಳು, ಮಲ್ಲಿಗೆ ಮಾಲೆ ಮತ್ತು ವಧುವಿಗೆ ಕೊಡುಗೆಯಾಗಿ ನೀಡುವ ವಿವಿಧ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಈ ಮೂಲಕ ಸೀರೆ ಉಟ್ಟು ಬಳೆತೊಟ್ಟ ಮಹಿಳೆಯರು ದುರ್ಬಲರು ಮತ್ತು ದೇಶ ನಡೆಸಲು ಅಸಮರ್ಥರು ಎಂಬಂತೆ ಬಿಂಬಿಸುವ ಮೂಲಕ ತಮ್ಮ ಸ್ತ್ರೀವಿರೋ ಮತ್ತು ಮಹಿಳೆಯರನ್ನು ಕೀಳಾಗಿ ಕಾಣುವ ಮಾನಸಿಕತೆಯನ್ನು ಪ್ರದರ್ಶಿಸಿದ್ದರು.
ಈ ಹಿಂದೆ ದೇಶದ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿದ್ದ ಇಂದಿರಾ ಗಾಂಧಿ ನೇತೃತ್ವ ಹೊಂದಿದ್ದ ಕಾಂಗ್ರೆಸ್ ಈಗ ಸೋನಿಯಾ ಗಾಂಧಿಯನ್ನು ಮಧ್ಯಂತರ ಅಧ್ಯಕ್ಷೆಯಾಗಿ ಹೊಂದಿದ್ದರೂ , ಇಂತಹ ಪ್ರದರ್ಶನ ನಡೆಸಿದ ಕಾಂಗ್ರೆಸ್ನ ನಾಯಕತ್ವ ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಎಂತಹ ದಿವಾಳಿತನಕ್ಕೆ ತಲುಪಿದೆ ಎಂಬುದಕ್ಕೆ ಸಾಕ್ಷಿ ಎಂಬುದಾಗಿ ವ್ಯಾಪಕ ಟೀಕೆಗಳು ಕೇಳಿಬಂದಿವೆ.