Monday, July 4, 2022

Latest Posts

ಬಿಕ್ಕಟ್ಟು ಸೃಷ್ಟಿಸುತ್ತಿದೆ ಅಂಕೋಲಾ ಪುರಸಭೆಯ ಇಕ್ಕಟ್ಟಾದ ಮಾರುಕಟ್ಟೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಅಂಕೋಲಾ:

ಪಟ್ಟಣದ ಪುರಸಭೆ ಕಚೇರಿಯ ಆವರಣದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಅಂಗಡಿಗಳ ಹಂಚಲಾಗಿದ್ದು,
ನಿಗದಿತ ಸ್ಥಳದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದ್ದರೂ ಶನಿವಾರ ಹೆಚ್ಚಿನ ಪ್ರಮಾಣದಲ್ಲಿ ಜನರು ಖರೀದಿಗೆ ಆಗಮಿಸಿದ್ದರಿಂದ ಇಕ್ಕಟ್ಟಾದ ಮಾರುಕಟ್ಟೆಯಲ್ಲಿ ಕೆಲವು ಕಾಲ ಜನದಟ್ಟಣೆಯಿಂದ ಗೊಂದಲದ ವಾತಾವರಣಕ್ಕೆ ಕಾರಣವಾಗಿದೆ.
ಅಂಕೋಲಾ ತಾಲೂಕಿನಲ್ಲಿ ಇದುವರೆಗೆ ಅಧಿಕೃತವಾಗಿ ವಾರದ ಸಂತೆ ಆರಂಭವಾಗಿಲ್ಲವಾದರೂ ಹಿಂದಿನ ಎರಡು ಶನಿವಾರ ಇಲ್ಲಿನ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಸಂತೆಯ ರೀತಿಯಲ್ಲೇ ವ್ಯಾಪಾರ ವಹಿವಾಟುಗಳು ನಡೆದಿದ್ದವು ಅಲ್ಲದೇ ಹೊರ ಜಿಲ್ಲೆಯ ಕೆಲವು ತರಕಾರಿ, ಹಣ್ಣು, ಸೇರಿದಂತೆ ಇತರ ವಸ್ತುಗಳ ವ್ಯಾಪಾರಿಗಳು ಆಗಮಿಸಿ ವ್ಯಾಪಾರ ನಡೆಸಿರುವುದು ಸ್ಥಳೀಯ ಜನರಲ್ಲಿ ಸಂತೆ ಆರಂಭಗೊಂಡ ಭಾವನೆ ಬರಲು ಕಾರಣವಾಗಿತ್ತು.
ಇದೀಗ ವಾರದ ಸಂತೆ ಇದೆಯೆಂದು ತಿಳಿದು ಗ್ರಾಮೀಣ ಪ್ರದೇಶಗಳಿಂದ ಜನರು ಆಗಮಿಸಿ ಅನಿವಾರ್ಯವಾಗಿ ಪುರಸಭೆ
ಆವರಣದಲ್ಲಿ ತರಕಾರಿ ಮಾರುಕಟ್ಟೆಗೆ ಖರೀದಿಗೆ ತೆರಳುವಂತಾಗಿದ್ದು ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಲು ಕಾರಣವಾಗಿದೆ.
ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಪಡೆದು ವ್ಯಾಪಾರ ನಡೆಸುವವರು ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಮಾಸ್ಕ್ ಧರಿಸದೇ ವ್ಯಾಪಾರ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು ಎರಡು ದಿನಗಳ ಹಿಂದೆ ಸಹಾಯಕ ಆಯುಕ್ತ ರಾಹುಲ್ ರತ್ನಮ್ ಪಾಂಡೆ ಅವರು ಆಗಮಿಸಿ ಬೇಸರ ವ್ಯಕ್ತಪಡಿಸಿ ಮಾಸ್ಕ್ ವಿತರಿಸಿ ಹೋದರೂ ಸಹ ಇವರ ಉಡಾಫೆಯ ಮನೋಭಾವ ಬದಲಾದಂತಿಲ್ಲ, ಶನಿವಾರ ಬೆಳಿಗ್ಗೆ ಸಹ ಅಂಕೋಲಾ ಪುರಸಭೆ ವತಿಯಿಂದ ಕೆಲವರಿಗೆ ದಂಡ ವಿಧಿಸುವ ಕಾರ್ಯ ನಡೆದಿವೆಯಾದರೂ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ.
ಪುರಸಭೆ ತರಕಾರಿ ಮಾರುಕಟ್ಟೆಯ ಪ್ರದೇಶ ಅಂಕೋಲಾ ತಾಲೂಕಿನ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು ಇಲ್ಲಿ ಶನಿವಾರ ಸಂತೆ ವಾತಾವರಣ ನಿರ್ಮಾಣವಾದರೆ ವಾಹನಗಳ ಪಾರ್ಕಿಂಗ್ ಮಾಡಲು ಸಹ ಕಷ್ಟ, ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ಮಾಡುವುದರಿಂದ ಸಂಚಾರಕ್ಕೂ ಸಮಸ್ಯೆಯಾಗಿರುವುದು ಕಂಡು ಬಂದಿದೆ.
ವಾರದ ಸಂತೆ ಇದುವರೆಗೆ ಆರಂಭವಾಗಿಲ್ಲ ಎಂದು ಸಾರ್ವಜನಿಕರಿಗೆ ಮನದಟ್ಟು ಮಾಡುವ ಮೂಲಕ ಶನಿವಾರ ಜನದಟ್ಟಣೆ ಆಗದಂತೆ ತಡೆಯುವ ಕಾರ್ಯ ಸಂಬಂಧಿಸಿದ ಇಲಾಖೆಗಳಿಂದ ನಡೆಯಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss