ಭಾರತದಲ್ಲಿ ಈ ಐಶಾರಾಮಿ ಕಾರ್‌ ಗೆ ಬೇಡಿಕೆ ಹೆಚ್ಚಿದೆಯಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚಿನ ದಿನಗಳಲ್ಲಿ ನೀವು ಆರ್ಥಿಕ ಕುಸಿತದ, ಆರ್ಥಿಕ ಹಿಂಜರಿತದ ಸುದ್ದಿಗಳನ್ನು ಓದಿರಬಹುದು. ಮಿತಿ ಮೀರಿದ ಹಣದುಬ್ಬರ ಜಗತ್ತಿನ ಇತರ ದೇಶಗಳನ್ನು ಬಾಧಿಸುತ್ತಿದೆ. ಭಾರತದಲ್ಲೂ ಹಣದುಬ್ಬರದ ಪರಿಣಾಮ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇವೆಲ್ಲದರ ನಡುವೆ ಇನ್ನೊಂದು ಸುದ್ದಿ ನಿಮ್ಮನ್ನು ಆಶ್ಚರ್ಯಚಕಿತಗೊಳಿಸಬಹುದು ಅದೇನೆಂದರೆ ಜಗತ್ತಿನ ಅತ್ಯಂತ ದುಬಾರಿ ಕಾರುಗಳ ಸಾಲಿನಲ್ಲಿರುವ ಲ್ಯಾಂಬೋರ್ಗಿನಿಯ ಬೇಡಿಕೆ ಭಾರತದಲ್ಲಿ ಹೆಚ್ಚಿದೆಯಂತೆ ಹಾಗಂತ ಸ್ವತಃ ಕಂಪನಿಯೇ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

ಕಳೆದ ವರ್ಷ ಸೂಪರ್ ಐಷಾರಾಮಿ ಕಾರು ತಯಾರಕ ಲ್ಯಾಂಬೋರ್ಗಿನಿ ಭಾರತವು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಒಂದಾಗಿದೆ ಎಂದು ಹೇಳಿತ್ತು. ಕಳೆದ ವರ್ಷದಲ್ಲಿ ಲ್ಯಾಂಬೋರ್ಗಿನಿ ಪಾಲಿಗೆ ಭಾರತವು ಉತ್ತಮ ಮಾರುಕಟ್ಟೆಯಾಗಿ ಪರಿಣಮಿಸಿತ್ತು. ಈ ವರ್ಷವೂ ಕೂಡ ಭಾರತದಲ್ಲಿ ಈ ಐಷಾರಾಮಿ ಸೂಪರ್‌ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತದ ಅಪಾಯಗಳ ಹೊರತಾಗಿಯೂ ಬೇಡಿಕೆಯು ಬಲವಾಗಿದೆ ಎಂದು ಕಂಪನಿ ಹೇಳಿದೆ.

ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಬೋರ್ಗಿನಿ ಮಾರಾಟವು 33 ಶೇಕಡಾದಷ್ಟು ಹೆಚ್ಚಿತ್ತು. ಈ ವರ್ಷವೂ ಭಾರತದಿಂದ ಹೆಚ್ಚಿನ ಆರ್ಡರ್‌ಗಳು ಬರುತ್ತಿವೆ. ಹೀಗಾಗಿ ಈ ವರ್ಷ ಮಾರಾಟವು ಇನ್ನೂ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಲ್ಯಾಂಬೋರ್ಗಿನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಲ್ಯಾಂಬೋರ್ಗಿನಿಯ ಸುಮಾರುರು 3 ಕೋಟಿಯಿಂದ 9 ಕೋಟಿ ರೂಪಾಯಿಗಳ ವರೆಗೆ ಬೆಲೆಬಾಳುವ ಉರುಸ್, ಅವೆಂಟಡಾರ್ ಮತ್ತು ಹ್ಯುರಾಕನ್ ಕಾರುಗಳು ಭಾರತದಲ್ಲಿ ಜನಪ್ರಿಯತೆ ಹೊಂದಿವೆ. 2022ರಲ್ಲಿ ಈ ರೀತಿಯ ಬೆಲೆಬಾಳುವ 92 ಕಾರುಗಳು ಭಾರತದಲ್ಲಿ ಮಾರಾಟವಾಗಿದೆ. ಈ ಬಾರಿ ಮಾರಾಟವು ಮೂರುಅಂಕೆಗಳ ಗಡಿ ದಾಟಬಹುದು ಎಂಬ ನೀರೀಕ್ಷೆಯಿದೆ ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!