ಹೊಸದಿಗಂತ ವರದಿ, ಬಳ್ಳಾರಿ:
ಇತ್ತಿಚಗೆ ಸುರಿದ ಅಕಾಲಿಕ ಮಳೆಯಿಂದ ದೇಶಕ್ಕೆ ಅನ್ನ ನೀಡುವ ರೈತರ ನಾನಾ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಕೂಡಲೇ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸಿರಗುಪ್ಪ ಶಾಸಕ ಎಂ.ಎಸ್ ಸೋಮಲಿಂಗಪ್ಪ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.
ವಿಶೇಷವಾಗಿ ಸಿರಗುಪ್ಪ ತಾಲುಕಿನಲ್ಲಿ ಮಳೆಯಿಂದ ರೈತರ ಭತ್ತ, ಮೆಣಸಿನಕಾಯಿ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳು ಸಂಪೂರ್ಣ ನಾಶವಾಗಿವೆ, ಇದರ ಜೊತೆಗೆ ತುಂಗಭದ್ರಾ ನದಿ ಪ್ರವಾಹ ಹಿನ್ನೆಲೆ ರೈತರ ಬೆಳೆಗಳು ನಾಶವಾಗಿವೆ. ಮಳೆಯಿಂದ ನಗರ, ಗ್ರಾಮಿಣ ಪ್ರದೇಶದಲ್ಲಿ ಮನೆಗಳು ಕುಸಿದಿವೆ, ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮೆಣಸಿನಕಾಯಿ ಹಾಗೂ ಭತ್ತದ ಬೆಳೆಗಳು ನಾಶವಾಗಿದ್ದು, ಕೆಲ ಕಡೆ ಸಂಗ್ರಹಿಸಿಟ್ಟಿದ್ದ ಭತ್ತದ ಚಿಲಗಳು ಮೊಳಕೆಯೊಡೆದಿವೆ, ಕೆಲ ಕಡೆ ಭತ್ತ ಜಮಿನಲ್ಲೆ ಮೊಳಕೆಯೊಡೆದಿವೆ. ಮಳೆಯಿಂದ ಕೆಲ ಕಡೆ ಮೆಣಸಿನಕಾಯಿ ನೀರು ಪಾಲಾಗಿವೆ. ಕೂಡಲೆ ರೈತರಿಗೆ ಸೂಕ್ತ ಪರಿಹಾರ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಗಳಿಂದ ವರದಿ ಪಡೆದು ಪರಿಹಾರ ಶೀಘ್ರದಲ್ಲೇ ವಿತರಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕ ಸೋಮಲಿಂಗಪ್ಪ ಅವರು ತಿಳಿಸಿದರು.