Saturday, July 2, 2022

Latest Posts

ಬಿರುಕು ಬಿಟ್ಟಿದ್ದ ಸಂಬಂಧವನ್ನು ಮತ್ತೆ ಬೆಸೆದ ಜಿಲ್ಲಾ ನ್ಯಾಯಾಲಯ

ಹೊಸದಿಗಂತ ವರದಿ, ಚಿತ್ರದುರ್ಗ:

ಕೌಟುಂಬಿಕ ಜಗಳದಿಂದ ಸಂಸಾರದಲ್ಲಿ ಬಿರುಕು ಮೂಡಿ ಪರಸ್ಪರ ದೂರವಾಗಬೇಕಿದ್ದ ದಂಪತಿಯನ್ನು ಮನವೊಲಿಸಿ ಪುನಃ ಇಬ್ಬರೂ ಒಂದುಗೂಡಿ ಜೀವನ ಸಾಗಿಸುವಂತೆ ಮಾಡಿದ ಪ್ರಸಂಗ ಶನಿವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು. ಪತಿ, ಪತ್ನಿ ಇಬ್ಬರೂ ಪರಸ್ಪರ ಸಮ್ಮತಿಸಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಿಸಿಕೊಂಡರು. ಇಬ್ಬರೂ ಜೊತೆಯಾಗಿ ಜೀವನ ಸಾಗಿಸುವುದಾಗಿ ನ್ಯಾಯಾಧೀಶರ ಎದುರು ಒಪ್ಪಿಗೆ ನೀಡಿದರು.
ಚಳ್ಳಕೆರೆ ತಾಲ್ಲೂಕಿನ ಕೊಂಡ್ಲಹಳ್ಳಿಯ ನಿವಾಸಿ ಗಂಗಾಧರ್ ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಕಳೆದ ೧೩ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗಂಗಾಧರ್ ತಮ್ಮದೇ ಗ್ರಾಮದ ಶಿವಲಕ್ಷ್ಮಿ ಎಂಬುವರ ಜೊತೆ ೨೮-೦೮-೨೦೧೩ ರಂದು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಬಳಿಕ ಶಿವಲಕ್ಷ್ಮಿ ಅವರನ್ನು ಹಾಸನಕ್ಕೆ ಕರೆದೊಯ್ದು ಸಂಸಾರ ನಡೆಸಿದ್ದರು. ಈ ನಡುವೆ ಶಿವಲಕ್ಷ್ಮಿ ಅವರ ತಂದೆ ಮೃತರಾದರು.
ತಾಯಿ ನಾಗರತ್ನಮ್ಮ ಒಬ್ಬರೇ ಆದ ಕಾರಣ ಶಿವಲಕ್ಷ್ಮಿ ಹಾಸನದಿಂದ ಕೊಂಡ್ಲಹಳ್ಳಿಗೆ ಬಂದು ತನ್ನ ತಾಯಿಯ ಜೊತೆ ವಾಸಿಸತೊಡಗಿದರು. ಪತ್ನಿಯ ಸಂಬಂಧಿಕರು ನಮ್ಮ ಸಂಸಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಪತಿ ಗಂಗಾಧರ್ ಆರೋಪಿಸಿದ್ದಾರೆ. ಹೀಗೆ ಚಿಕ್ಕಪುಟ್ಟ ವಿಷಯಕ್ಕೆ ಜಗಳವಾಗಿ ಪರಸ್ಪರ ಮನಸ್ತಾಪ ಉಂಟಾಯಿತು. ಇದರಿಂದ ಬೇಸತ್ತ ಪತ್ನಿ ಶಿವಲಕ್ಷ್ಮಿ ಗಂಡನ ಮನೆಗೆ ಹೋಗಲು ನಿರಾಕರಿಸಿದರು.
ಗಂಡನಿಂದ ದೂರವಾದ ಪತ್ನಿ ಶಿವಲಕ್ಷ್ಮಿ ತನ್ನ ಜೀವನ ನಿರ್ವಹಣೆಗೆ ಗಂಡನಿಂದ ಪರಿಹಾರ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪತ್ನಿಯ ಜೀವನ ನಿರ್ವಹಣೆಗೆ ಮಾಸಿಕ ೬೦೦೦ ರೂ. ನೀಡುವಂತೆ ಗಂಗಾಧರ್ ಅವರಿಗೆ ಆದೇಶ ಮಾಡಿತ್ತು. ಬಳಿಕ ಗಂಗಾಧರ್ ಸಹ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೀಗೆ ವಿಚಾರಣೆ ಹಂತದಲ್ಲಿ ನ್ಯಾಯಾಧೀಶರು ಪತಿ, ಪತ್ನಿ ಜೊತೆಯಾಗಿ ಜೀವ ನಡೆಸುವಂತೆ ಮನವೊಲಿಸಿದರು.
ನ್ಯಾಯಾಧೀಶರ ಪ್ರಯತ್ನ ಫಲ ನೀಡಿದ್ದು, ಪತಿ – ಪತ್ನಿ ಪರಸ್ಪರ ಒಮ್ಮತದಿಂದ ಜೀವನ ಸಾಗಿಸುವುದಾಗಿ ನ್ಯಾಯಾಲಯದ ಮುಂದೆ ಒಪ್ಪಿಗೆ ನೀಡಿದ್ದಾರೆ. ನ್ಯಾಯಾಧೀಶರ ಎದುರು ಶನಿವಾರ ಪರಸ್ಪರ ಹಾರ ಬದಲಾಯಿಸಿದ ಜೋಡಿ ನೆರೆದಿದ್ದವರಿಗೆ ಸಿಹಿಹಂಚಿ ಖುಷಿಪಟ್ಟಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರೇಮಾವತಿ ಎಂ ಮನುಗೊಳಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಜಿತೇಂದ್ರನಾಥ್, ೨ನೇ ಅಪರ ಹರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ್ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss