ಹೊಸದಿಗಂತ ವರದಿ, ಮಂಗಳೂರು:
ಸೇವಾ ಭದ್ರತೆ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅವುಗಳ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರು ಡಿ.10ರಿಂದ ಆಹೋರಾತ್ರಿ ಧರಣಿ, ತರಗತಿ ಬಹಿಷ್ಕಾರದ ಮೂಲಕ ಪ್ರತಿಭಟಿಸುತ್ತಿದ್ದೇವೆ. ಆದರೆ ಸರಕಾರ ನಮ್ಮತ್ತ ನೋಡುತ್ತಿಲ್ಲ ಎಂದು ಪ್ರತಿಭಟನೆಯಲ್ಲಿ ತೊಡಗಿದವರು ಬೇಸರ ವ್ಯಕ್ತ ಪಡಿಸಿದ್ದಾರೆ.
ನಮ್ಮ ಸೇವೆಯನ್ನು ಆವಶ್ಯಕ ಎಂದು ಪರಿಗಣಿಸಬೇಕು. ಆ ಮೂಲಕ ನಮಗೆ ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತ ರಕ್ಷಣಾ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.
ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಬೇಕು. ಶೀಘ್ರವೇ ನಮ್ಮ ಸಮಸ್ಯೆಗಳನ್ನು ನಿವಾರಿಸ ಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರಿಗೆ ಜಿಲ್ಲಾ ಘಟಕ ಬುಧವಾರ ಮನವಿ ಸಲ್ಲಿಸಿತು.
ಜಿಲ್ಲಾ ಘಟಕದ ಅಧ್ಯಕ್ಷ ಧೀರಜ್ ಕುಮಾರ್, ಉಪಾಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ದಡ್ಡಿಮನಿ, ಸಂಘಟನಟ ಕಾರ್ಯದರ್ಶಿ ಶ್ರೀನಿವಾಸ ಮತ್ತು ಹರ್ಷತರಾಣಿ ಮೊದಲಾವರು ಉಪಸ್ಥಿತರಿದ್ದರು.