ತೆರೆಯಿತು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಕ್ಷೇತ್ರ ಅಯ್ಯಪ್ಪ ಸ್ವಾಮಿ ದರುಶನ ಯಾತ್ರೆ ಆರಂಭಗೊಂಡಿದೆ. ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಉತ್ಸವಕ್ಕಾಗಿ ಬುಧವಾರ ಸಂಜೆ ಶಬರಿಮಲೆ ದೇಗುಲದ ಬಾಗಿಲನ್ನು ತೆರೆಯಲಾಯಿತು.

ನಿರ್ಗಮಿಸುತ್ತಿರುವ ಪ್ರಧಾನ ಅರ್ಚಕರಾದ ಎನ್‌. ಪರಮೇಶ್ವರನ್‌ ನಂಬೂದರಿ ಮತ್ತು ಮುಖ್ಯ ಅರ್ಚಕರಾದ (ತಂತ್ರಿಗಳು) ಕಂದಾರಾರು ರಾಜೀವರು ಬುಧವಾರ ಸಂಜೆ 5 ಗಂಟೆಗೆ ದೇಗುಲದ ಬಾಗಿಲನ್ನು ತೆರೆದು, ವಿಶೇಷ ಪೂಜೆ ಸಲ್ಲಿಸಿದರು. ನೂತನ ಪ್ರಧಾನ ಅರ್ಚಕ (ಮೇಲ್ಸಂತಿ) ಕೆ. ಜಯರಾಮನ್‌ ನಂಬೂದರಿ ಮತ್ತು ಮಾಲಿಕಪುರಮ್‌ನ ಹರಿಹರನ್‌ ನಂಬೂದರಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.

ಈ ಮೂಲಕ ಭಕ್ತರಿಗೆ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ದೇವರ ದರುಶನ ಪಡೆಯಲು ಅವಕಾಶ ಮಾಡಿಕೊಡಲಾಯಿತು.

ಕೊರೋನಾ ಕಡಿಮೆ ಇರುವ ಹಿನ್ನೆಲೆ ಯಾತ್ರೆ ಕೈಗೊಳ್ಳಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ.‌ ಹೀಗಾಗಿ ಈ ಬಾರಿ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿ ನಿತ್ಯ 1.2 ಲಕ್ಷ ಭಕ್ತರಿಗೆ ಅಯ್ಯಪ್ಪನ ದರುಶನ ಪಡೆಯಲು ಅವಕಾಶ ನೀಡಲಾಗುತ್ತಿದೆ. ಭದ್ರತೆಗಾಗಿ 13 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

41 ದಿನಗಳ ಕಾಲ ಮಂಡಲ ಪೂಜೆಯು ನಡೆಯಲಿದ್ದು, ಮಲಯಾಳ ಪಂಚಾಂಗದ ಪ್ರಕಾರ ವೃಶ್ಚಿಕ ಮಾಸದ ಮೊದಲ ದಿನ ಮಂಡಲ ವ್ರತಾಚರಣೆ ಆರಂಭವಾಗಿ, ಧನುರ್ಮಾಸದ 11ನೇ ದಿನ ವ್ರತಾಚರಣೆ ಸಂಪನ್ನವಾಗಲಿದೆ. ಅಂದರೆ ನ.16 ರಿಂದ ಆರಂಭಗೊಂಡು, ಡಿಸೆಂಬರ್‌ 27ಕ್ಕೆ ಮಂಡಲ ಪೂಜೆಯ ವ್ರತಾಚರಣೆ ಅಂತ್ಯವಾಲಿದೆ.

ಮಂಡಲ ಪೂಜೆಗಾಗಿ ಡಿಸೆಂಬರ್‌ 27 ರಂದು ದೇಗುಲವನ್ನು ಮುಚ್ಚಲಾಗುತ್ತದೆ. ಡಿಸೆಂಬರ್‌ 30 ರಂದು ಮತ್ತೆ ದೇಗುಲದ ಬಾಗಿಲನ್ನು ತೆರೆದು ಮಕರ ಜ್ಯೋತಿಯು ದರುಶನ ವಾಗುವವರೆಗೂ ಅಂದರೆ ಜನವರಿ 14 ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!