ಹೊಸದಿಗಂತ ವರದಿ, ಶಿವಮೊಗ್ಗ:
ಸಾಗರ ತಾಲೂಕಿನ ತಾಳಗುಪ್ಪದ ಪುರಾತನ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದ ಬಾಗಿಲು ಒಡೆದು ಹಾಡುಹಗಲೇ ಹುಂಡಿ ಹಾಗೂ ಗಂಟೆಯನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೇವಸ್ಥಾನದ ಬಾಗಿಲು ಒಡೆದು ಒಳಗೆ ನುಗ್ಗಿರುವ ಕಳ್ಳರು ಸುಮಾರು 30 ಹಿತ್ತಾಳೆಯ ಗಂಟೆ ಹಾಗೂ ಹುಂಡಿ ಒಡೆದು ಸುಮಾರು 10 ಸಾವಿರ ರೂ. ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಮಧ್ಯಾಹ್ನ 2-30ರವರೆಗೆ ದೇವಸ್ಥಾನದಲ್ಲಿ ಮದುವೆ ನಡೆಯುತಿತ್ತು. ಮದುವೆ ಮುಗಿಸಿ ಅರ್ಚಕರು ದೇವಸ್ಥಾನದ ಬಾಗಿಲು ಹಾಕಿ ಹೋಗಿರುವುದನ್ನು ಗಮನಿಸಿದ ಕಳ್ಳರು ಮಧ್ಯಾಹ್ನ 3ರಿಂದ 4ರೊಳಗೆ ತಮ್ಮ ಕೈಚಳಕ ತೋರಿಸಿದ್ದಾರೆ. ಅರ್ಚಕರು ಐದು ಗಂಟೆಗೆ ದೇವಸ್ಥಾನಕ್ಕೆ ಪೂಜೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದ ಬೆಟ್ಟದ ಮೇಲೆ ಇದ್ದು ಜನಸಂಚಾರ ಕಡಿಮೆ ಇರುತ್ತದೆ. ದೇವಸ್ಥಾನದ ಸುತ್ತಮುತ್ತಲೂ ಮನೆ ಸಹ ಇಲ್ಲ. ಈ ಸಂಬಂಧ ದೇವಸ್ಥಾನ ಸಮಿತಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.