ಆರ್ಥಿಕ ಸಮೀಕ್ಷೆ 2022: ಸವಾಲಿನ ವರ್ಷದಲ್ಲಿ ಒಳ್ಳೇದು ಕೆಟ್ಟದ್ದರ ಲೆಕ್ಕ ಹೇಗೆ ಬಿಚ್ಚಿಟ್ಟಿದೆ ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಜೆಟ್ ಮಂಡನೆಯ ಮುನ್ನಾದಿನ ಸಂಸತ್ತಿನ ಎದುರಿಗೆ ಬಂದು ಸಾರ್ವಜನಿಕಗೊಳ್ಳುವ ಆರ್ಥಿಕ ಸಮೀಕ್ಷೆ ಮುಖ್ಯವಾಗಿ ಎರಡು ಕೆಲಸಗಳನ್ನು ಮಾಡುತ್ತದೆ. ಈ ಹಿಂದಿನ ವಿತ್ತೀಯ ವರ್ಷ ಸಾಗಿಬಂದ ಹಾದಿಯ ಸಣ್ಣ ಅವಲೋಕನ ಹಾಗೂ ವಿಮರ್ಶೆ ಇರುತ್ತದೆ. ಎರಡನೆಯದಾಗಿ, ಈ ವರ್ಷದ ಬಜೆಟ್ಟು ಹೇಗಿದ್ದೀತು, ಇರುವ ಸವಾಲುಗಳೇನು ಎಂಬ ಸೂಚನೆಯನ್ನೂ ಕೊಡುತ್ತದೆ.

2022ರ ಕೇಂದ್ರ ಬಜೆಟ್ಟಿಗೆ ಪೂರ್ವಭಾವಿಯಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮಂಡನೆಯಾಗಿರುವ ಆರ್ಥಿಕ ಸಮೀಕ್ಷೆ ಏನು ಹೇಳುತ್ತದೆ, ಇದರಲ್ಲಿ ಒಳ್ಳೇದೇನು ಮತ್ತು ಸ್ವಲ್ಪ ಹೆದರಿಸುವ ಅಥವಾ ನಕಾರಾತ್ಮಕ ಅಂಶಗಳೇನು ಎಂಬುದರ ಸ್ಥೂಲನೋಟ ಇಲ್ಲಿದೆ.

ಸಮೀಕ್ಷೆ ಗುರುತಿಸುವ ಒಳ್ಳೆಯ ಅಂಶಗಳು

  • ಮಹಾಮಾರಿ ಕಾರಣದಿಂದ 2020-21ರಲ್ಲಿ ಕುಸಿತಕ್ಕೆ ಒಳಗಾಗಿದ್ದ ಜಿಡಿಪಿ ಬೆಳವಣಿಗೆ ದರ 2021-22ರಲ್ಲಿ ಶೇ. 9.2ರ ಬೆಳವಣಿಗೆ ಕಾಣುವ ಅಂದಾಜಿದೆ. ಇದರರ್ಥ, ಸಾಂಕ್ರಾಮಿಕದ ಆರ್ಥಿಕ ಹೊಡೆತದಿಂದ ಭಾರತ ವೇಗವಾಗಿ ಚೇತರಿಸಿಕೊಳ್ಳುತ್ತ ಹೊರಬರುತ್ತಿದೆ.
  • ಮಹಾಮಾರಿಯಿಂದ ಆರ್ಥಿಕ ವಲಯವೇ ಮಹಾಪ್ರಹಾರ ಕಂಡಿರುವ ವರ್ಷದಲ್ಲಿ ದೇಶದ ಕೈಹಿಡಿದಿದ್ದು ಕೃಷಿವಲಯ. ಮಹಾಮಾರಿಯ ಮಧ್ಯದಲ್ಲೂ ಈ ವಲಯ ಕುಂಠಿತವಾಗಿಲ್ಲ. ಹಿಂದಿನ ವರ್ಷ 3.6 ಶೇಕಡ ಬೆಳವಣಿಗೆ ಕಂಡಿದ್ದ ಕೃಷಿ ಮತ್ತು ಅದರ ಪೂರಕ ವಲಯವು ಈ ಬಾರಿಯೂ ಶೇ. 3.9ರ ಬೆಳವಣಿಗೆಯಲ್ಲಿ ಸಾಗುವ ಅಂದಾಜಿದೆ.
  • ಉಪಭೋಗದ ಪ್ರಮಾಣವೂ 2021-22ರಲ್ಲಿ ಶೇ 7.6 ಬೆಳೆಯುತ್ತಿದೆ, ಇದಕ್ಕೆ ಸರ್ಕಾರವು ಮಾಡಿರುವ ವೆಚ್ಚ ಅರ್ಥಾತ್ ಅರ್ಥವ್ಯವಸ್ಥೆಗೆ ಅದು ಹಣ ಹರಿಸಿರುವುದರ ಪರಿಣಾಮ. ವಸ್ತು ಮತ್ತು ಸೇವೆಗಳ ರಫ್ತು ಸಹ ಉತ್ತಮ ಚೇತರಿಕೆ ಕಂಡಿದೆ.
  • ಆರೋಗ್ಯ ಮತ್ತು ಮೂಲಸೌಕರ್ಯಾಭಿವೃದ್ಧಿಯಲ್ಲಿ ಭಾರತ ಅತಿಹೆಚ್ಚು ಖರ್ಚು ಮಾಡಬೇಕಾಗಿ ಬಂದರೂ, ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹವಾಗಿರುವ ಆದಾಯವು ವಿತ್ತೀಯ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕೆ ಸಹಕರಿಸಿದೆ.
  • ರಿಸ್ಕ್ ನಿಭಾಯಿಸಲು ಬೇಕಾಗುವ ಬಂಡವಾಳ ಎತ್ತುವುದರಲ್ಲಿ ಕಾರ್ಪೋರೇಟ್ ವಲಯ ಯಶಸ್ವಿಯಾಗಿದೆ. ವಿಶೇಷವಾಗಿ 2021-22ರ ವಿತ್ತೀಯ ವರ್ಷದಲ್ಲಿ ಭಾರತದ ನವೋದ್ದಿಮೆಗಳಿಗೆ ಹೂಡಿಕೆ ಸರಾಗವಾಗಿ ಹರಿದುಬಂದಿದೆ.
  • ಸರ್ಕಾರವು ಬ್ಯಾಂಕಿಂಗ್ ವಲಯಕ್ಕೆ ಬಂಡವಾಳವನ್ನು ಹರಿಸಿರುವ ಕಾರಣ ಸಾಂಕ್ರಾಮಿಕದ ಆಘಾತದ ಹೊರತಾಗಿಯೂ ಕೆಟ್ಟಸಾಲಗಳ ಅನುಪಾತಗಳು ಕಡಿಮೆಯಾಗಿವೆ.
  • ಮಹಾಮಾರಿಯ ಹೊಡೆತದ ನಡುವೆಯೂ ಭಾರತದ ಸೂಕ್ಷ್ಮ ಆರ್ಥಿಕ ಸೂಚ್ಯಂಕಗಳ ಆರೋಗ್ಯ ಚೆನ್ನಾಗಿದೆ. ಉದಾಹರಣೆಗೆ ಭಾರತದ ವಿದೇಶಿ ವಿನಿಮಯ ನಿಧಿ ಉತ್ತಮವಾಗಿದ್ದು, 635 ಬಿಲಿಯನ್ ಡಾಲರ್ ಹೊಂದಿದೆ. ಅರ್ಥಾತ್, ಮುಂದಿನ 13 ತಿಂಗಳವರೆಗೆ ಭಾರತ ತನ್ನ ಆಮದನ್ನು ನಿರ್ವಹಿಸುವಷ್ಟು ಈ ನಿಧಿ ಸುಭಿಕ್ಷವಾಗಿದೆ.
  • ಭಾರತದ ಅತಿವೇಗದ ಲಸಿಕಾ ಪ್ರಕ್ರಿಯೆ ಆರ್ಥಿಕ ಚೇತರಿಕೆಯ ವೇಗವನ್ನು ಹೆಚ್ಚಿಸಿದೆ.

ಸಮೀಕ್ಷೆ ಗುರುತಿಸಿರುವ ನಕಾರಾತ್ಮಕ ಅಂಶಗಳು

  • ಮಹಾಮಾರಿಯಿಂದ ಸೇವಾಕ್ಷೇತ್ರ ಅತ್ಯಂತ ಕೆಟ್ಟ ಹೊಡೆತ ತಿಂದಿದೆ. ಅದರಲ್ಲೂ ಮನುಷ್ಯರ ಸಂಪರ್ಕದಿಂದ ನಡೆಯುವ ವಹಿವಾಟುಗಳು ಭಾರಿ ಹೊಡೆತ ತಿಂದಿವೆ.
  • ಒಮಿಕ್ರಾನ್ ರೂಪಾಂತರ ವೈರಸ್ಸಿನ ಹರಡುವಿಕೆಯಿಂದ ಪ್ರವಾಸೋದ್ಯಮ ವಿಭಾಗವು ಇನ್ನೂ ಅನಿಶ್ಚಿತತೆಯಲ್ಲೇ ಮುಂದುವರಿದಿದೆ.
  • ಜಾಗತಿಕವಾಗಿ ಇಂಧನ ಬೆಲೆಗಳು ಏರುತ್ತಲೇ ಇರುವುದರಿಂದ ‘ಹಣದುಬ್ಬರವನ್ನು ಆಮದಾಗಿಸಿಕೊಳ್ಳುವ’ ಸ್ಥಿತಿಯಿಂದ ಭಾರತ ತಪ್ಪಿಸಿಕೊಳ್ಳುವುದು ಕಷ್ಟವಿದೆ.
  • ಮಹಾಮಾರಿಯಿಂದ ಅಸ್ತವ್ಯಸ್ತವಾಗಿರುವ ಪೂರೈಕೆ ಸರಪಣಿಯನ್ನು ತಾನೇ ಮುಂಚೂಣಿಯಲ್ಲಿ ನಿಂತು ಸರಿಪಡಿಸುವುದಕ್ಕೆ ಭಾರತ ಸುಧಾರಣೆಗಳನ್ನು ಹಮ್ಮಿಕೊಂಡಿರುವುದನ್ನು ಆರ್ಥಿಕ ಸಮೀಕ್ಷೆ ಬೊಟ್ಟು ಮಾಡಿದೆಯಾದರೂ, ಜತೆಯಲ್ಲೇ ಜಾಗತಿಕ ವಾಸ್ತವವನ್ನೂ ಹೇಳಿದೆ. ಅಟೊಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಗಳಲ್ಲಿ ಬಳಸುವ ಸೆಮಿಕಂಡಕ್ಟರ್ ಪೂರೈಕೆ ಸರಪಣಿ ಸದ್ಯಕ್ಕೆ ಸರಿಯಾಗುವ ಭರವಸೆ ಇಲ್ಲ. ಏಕೆಂದರೆ ಈ ವಿಭಾಗದಲ್ಲಿ ಉತ್ಪನ್ನ ತಯಾರಿಕೆಗೆ 18-20 ವಾರಗಳು ಬೇಕು ಎಂದು ಜಾಗತಿಕ ಅಧ್ಯಯನ ವರದಿಗಳನ್ನು ಉಲ್ಲೇಖಿಸಿ ಸಮೀಕ್ಷೆ ಕಹಿ ವಾಸ್ತವವನ್ನು ಮುಂದಿರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!