Sunday, August 14, 2022

Latest Posts

ಕೊರೋನಾದಿಂದ ಬಿದ್ದಿದ್ದಕ್ಕಿಂತ ಹೆಚ್ಚು ವೇಗವಾಗಿ ಚೇತರಿಕೆ ಕಂಡ ದೇಶದ ಆರ್ಥಿಕತೆ: ಪ್ರಧಾನಿ ಮೋದಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಆರ್ಥಿಕತೆ ಮೇಲೆ ಕೊರೋನಾ ಪರಿಣಾಮವು ಬಿದ್ದಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಅದರಿಂದ ಚೇತರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.
‘ಸರ್ಧಾರ್‌ಧಾಮ್‌ ಭವನ’ವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊವಿಡ್-19ನಿಂದ ಭಾರತವೂ ಸೇರಿದಂತೆ ಇಡೀ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಆದರೆ ಕೊರೋನಾದಿಂದ ನಿಂತು ಹೋಗಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಆರ್ಥಿಕತೆಯು ಚೇತರಿಕೆಯನ್ನು ಕಂಡಿದೆ ಎಂದು ಹೇಳಿದ್ದಾರೆ.
ವಿಶ್ವದ ಪ್ರಬಲ ಆರ್ಥಿಕತೆಗಳು ತಮ್ಮನ್ನು ತಾವು ಉಳಿಸಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಾಗ ನಾವು ಸುಧಾರಣೆಗಳನ್ನು ಮಾಡಿದ್ದೇವೆ. ಜಾಗತಿಕ ಪೂರೈಕೆ ಜಾಲವು ಅಸ್ತವ್ಯಸ್ತವಾದಾಗ ಭಾರತದ ಪರವಾಗಿ ಹೊಸ ಅವಕಾಶಗಳು ಸೃಷ್ಟಿಯಾಗುವ ಸಲುವಾಗಿ ನಾವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಪರಿಚಯಿಸಿದೆವು ಎಂದು ಸೇರಿಸಿದ್ದಾರೆ.ಈ ಯೋಜನೆಯನ್ನು ಈಗ ಟೆಕ್ಸ್​ಟೈಲ್ ವಲಯಕ್ಕೂ ವಿಸ್ತರಿಸಿದ್ದೇವೆ. ಸೂರತ್​ನಂಥ ನಗರವು ಇದರಿಂದ ಗರಿಷ್ಠ ಮಟ್ಟದ ಅನುಕೂಲ ಪಡೆಯಬಹುದು ಎಂದಿದ್ದಾರೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಮಂಗಳವಾರದಂದು ಬಹಿರಂಗ ಮಾಡಿರುವ ಡೇಟಾದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕಕ್ಕೆ ಭಾರತದ ಆರ್ಥಿಕ ಬೆಳವಣಿಗೆ ಶೇ 20.1ರಷ್ಟು ದಾಖಲಿಸಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಗೆ ಕಡಿಮೆ ಮೂಲಾಂಶ ಇದ್ದದ್ದರ ಪರಿಣಾಮ ಈ ಬೆಳವಣಿಗೆ ಆಗಿದೆ. ಕೊರೋನಾ ಎರಡನೇ ಅಲೆಯ ಹೊರತಾಗಿಯೂ ಇಂಥದ್ದೊಂದು ಬೆಳವಣಿಗೆಯು ಆಗಿದೆ.2020- 21ನೇ ಸಾಲಿನ ಏಪ್ರಿಲ್​​ನಿಂದ ಜೂನ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 24.4ರಷ್ಟು ಕುಗ್ಗಿತ್ತು. ಟೆಕ್ಸ್​ಟೈಲ್ ಮತ್ತು ಆಟೋಮೊಬೈಲ್ ಸೇರಿದಂತೆ 10 ಪ್ರಮುಖ ವಲಯಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಅನ್ನು ಕೇಂದ್ರದಿಂದ ಪರಿಚಯಿಸಲಾಗಿದೆ. ಕೊರೋನಾ ಬಿಕ್ಕಟ್ಟಿನ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುವುದಕ್ಕೆ ಇದರಿಂದ ಸಹಾಯ ಆಗುತ್ತದೆ ಎಂದು ಇಂಥ ನಿರ್ಧಾರ ಮಾಡಲಾಗಿದೆ. 21ನೇ ಶತಮಾನದಲ್ಲಿ ನಮ್ಮನ್ನು ನಾವು ಜಾಗತಿಕ ಆರ್ಥಿಕ ನಾಯಕತ್ವದ ಸ್ಥಾನದಲ್ಲಿ ನೋಡುತ್ತೇವೆ, ದೊಡ್ಡದಾಗಿ ಏನನ್ನಾದರೂ ಸಾಧಿಸುವುದಕ್ಕೆ ಭಾರತದಲ್ಲಿ ಅವಕಾಶಗಳಿಗೇನೂ ಕೊರತೆ ಇಲ್ಲ ಎಂದು ಮೋದಿ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss