ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಗೆ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ತರುವಂತೆ ಕೋರಿದ್ದ ಪಿಐಎಲ್‌ನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಾಳೆ ಅವರ ಪೀಠ ಅರ್ಜಿ ವಜಾಗೊಳಿಸಿ, ಇಂತಹ ಅದ್ಭುತ ಐಡಿಯಾಗಳು ನಿಮಗೆ ಹೇಗೆ ಬರುತ್ತವೆ ಎಂದು ಅರ್ಜಿದಾರನನ್ನ ತರಾಟೆಗೆ ತೆಗೆದುಕೊಂಡರು. ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂಗಳನ್ನು (ವಿದ್ಯುನ್ಮಾನ ಮತಯಂತ್ರ) ತಿರುಚಲಾಗಿರಲ್ಲ. ನೀವು ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂಗಳನ್ನು ತಿರುಚಲಾಗಿರುತ್ತೆ ಅಲ್ವಾ ಎಂದು ಟೀಕಿದರು.
ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರೆ ಆಮಿಷ ಒಡ್ಡುವವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕನಿಷ್ಠ ಐದು ವರ್ಷಗಳವರೆಗೆ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರ ಕೆಎ ಪಾಲ್ ಕೋರಿದ್ದರು.
ಟೆಸ್ಲಾದ ಸಿಇಒ ಮತ್ತು ಸಹ-ಸಂಸ್ಥಾಪಕ ಎಲೋನ್ ಮಸ್ಕ್, ಆಂಧ್ರದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕೂಡ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಬಹುದು ಎಂದಿದ್ದಾರೆಂದು ಅರ್ಜಿದಾರರು ಉಲ್ಲೇಖಿಸಿದ್ದರು.