ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ₹ 47,541 ಕೋಟಿ ಬಿಡುಗಡೆಗೆ ಒಪ್ಪಿದ ವಿತ್ತ ಸಚಿವೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಜ್ಯ ಸರಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ₹ 47,541 ಕೋಟಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಇದು 2022ರ ಜನವರಿ ತಿಂಗಳಿಗೆ ಮಾಮೂಲಿಯಂತೆ ಹಂಚಿಕೆಯಾಗುವ ತೆರಿಗೆಯ ಜೊತೆಗೆ ಹೆಚ್ಚುವರಿಯಾಗಿದ್ದು, ಅದನ್ನು ಇಂದು ಬಿಡುಗಡೆ ಮಾಡಲಾಗಿದೆ.

ಇದರಿಂದಾಗಿ ರಾಜ್ಯಗಳು 2022ರ ಜನವರಿ ತಿಂಗಳಲ್ಲಿ ಒಟ್ಟು ₹ 95,082 ಕೋಟಿ ಅಥವಾ ತಮಗೆ ಹಂಚಿಕೆಯಾಗಿರುವುದಕ್ಕಿಂತ ದುಪ್ಪಟ್ಟು ಹಣವನ್ನು ಸ್ವೀಕರಿಸಲಿವೆ.

ಭಾರತ ಸರಕಾರ ರಾಜ್ಯಗಳ ತೆರಿಗೆ ಹಂಚಿಕೆಯ ಮೊದಲ ಮುಂಗಡ ಕಂತು ₹ 47,541 ಕೋಟಿಗಳನ್ನು ನವೆಂಬರ್ 22ರಂದೇ ಬಿಡುಗಡೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಇಂದು ಎರಡನೇ ಮುಂಗಡ ಕಂತು ಬಿಡುಗಡೆಯಾಗುವುದರೊಂದಿಗೆ ರಾಜ್ಯಗಳು ಒಟ್ಟು ತೆರಿಗೆ ಹಂಚಿಕೆಯಲ್ಲಿ ಹೆಚ್ಚುವರಿಯಾಗಿ ₹ 90,082 ಕೋಟಿಗಳನ್ನು ಸ್ವೀಕರಿಸಲಿವೆ. ಇದು ಜನವರಿ 2022ರ ವರೆಗೆ ಅಂದಾಜಿಸಿದ್ದಕ್ಕಿಂತ ಅಧಿಕ ಮೊತ್ತವಾಗಿದೆ.

ಅಲ್ಲದೆ ಭಾರತ ಸರಕಾರ 2021-22ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಉಂಟಾಗುವ ಜಿಎಸ್‌ಟಿ ಪರಿಹಾರದ ಕೊರತೆಯನ್ನು ನೀಗಿಸಲು ₹ 1.59 ಲಕ್ಷ ಕೋಟಿ ಮೊತ್ತದ ಸಾಲವನ್ನು ಆಗಾಗ್ಗೆ ನೀಡುತ್ತಿದ್ದು, ಅದು 2021ರ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಂಡಿದೆ.
ಕೋವಿಡ್-19 ಸಾಂಕ್ರಾಮಿಕದ ಹಾನಿಕಾರಕ ಪರಿಣಾಮಗಳನ್ನು ನಿವಾರಿಸಲು ಮತ್ತು ಬಂಡವಾಳ ಹಾಗೂ ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ರಾಜ್ಯಗಳ ಶಕ್ತಿವರ್ಧನೆಗೆ ಭಾರತ ಸರಕಾರ ಬದ್ಧವಾಗಿದ್ದು, ಅದಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!