ಬ್ರಿಟೀಷ್‌ ಕಾನೂನುಗಳಿಗೆ ಸೆಡ್ಡು ಹೊಡೆದ ಮೊದಲ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್!

ತ್ರಿವೇಣಿ ಗಂಗಾಧರಪ್ಪ

ʻಶಿಕ್ಷಣʼ ಯಾರೊಬ್ಬರ ಸ್ವತ್ತಲ್ಲ. ಲಿಂಗ ಸಮಾನತೆ ಸಾಧಿಸುವ ಮತ್ತೊಂದು ಅಸ್ತ್ರ. ಇದೆಲ್ಲವೂ ಸ್ವತಂತ್ರ್ಯ ನಂತರ ಅಸ್ಥಿತ್ವವನ್ನು ಪಡೆದುಕೊಂಡರೂ ಸ್ವತಂತ್ರ್ಯ ಪೂರ್ವದಲ್ಲಿ ಅಷ್ಟು ಸುಲಭದ ಮಾತಾಗಿರಲಿಲ್ಲ. ಬ್ರಿಟೀಷ್‌ ಸಾಮ್ರಾಜ್ಯಶಾಹಿ ಪ್ರಭುತ್ವದ ಅಸಂಬದ್ಧ ಕಾನೂನು ಕಟ್ಟಲೆಗಳ ಸಂಕೋಲೆಯೊಳಗೆ ಹುದುಗಿಹೋಗಿದ್ದ ಕಾಲವದು. ಅದರಲ್ಲೂ ಶಿಕ್ಷಣ ಜಾಗೃತಗೊಳಿಸುವ ನಿಟ್ಟಿನಲ್ಲಿ ವಿದ್ಯಾಭ್ಯಾಸಕ್ಕೆ ಕಡಿವಾಣ ಹಾಕಲಾಗಿತ್ತು. ಮುಖ್ಯವಾಗಿ ಹೆಣ್ಣುಮಕ್ಕಳ ಕಲಿಕೆ ಯಕ್ಷಪ್ರಶ್ನೆಯೇ ಆಗಿತ್ತು. ಆಗಲೇ ಬ್ರಟೀಷರ ಕಾನೂನು ಕಟ್ಟಲೆಗಳಿಗೆ ಸೆಡ್ಡು ಹೊಡೆದು ಮೊಟ್ಟ ಮೊದಲ ಚಾರ್ಟರ್ಡ್ ಅಕೌಂಟೆಂಟ್‌ ಹುದ್ದೆ ಅಲಂಕರಿಸಿದ ಕೀರ್ತಿ ಈಕೆಗೆ ಸಲ್ಲುತ್ತದೆ.

ಭಾರತದ ಮೊದಲ ಮಹಿಳಾ ಸಿಎ ಆರ್.ಶಿವಭೋಗಮ್ ಅವರಂತಹ ವಿದ್ಯಾವಂತ ಮಹಿಳೆಯನ್ನು ಯಾವುದೇ ಪುರುಷ ಮದುವೆಯಾಗುವುದಿಲ್ಲ ಎಂಬ ಆತಂಕ ಆಕೆಯ ಪೋಷಕರಿಗಿದ್ದರೆ, ಮತ್ತೊಂದು ಕಡೆ ಬ್ರಿಟಿಷ್ ಕಾನೂನುಗಳು ಸ್ವತಂತ್ರ ಅಭ್ಯಾಸವನ್ನು ನಿಷೇಧಿಸಿತ್ತು. ಅವರ ಪ್ರಕಾರ, ಈಕೆ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಜೈಲು ಪಾಲಾದ ದೇಶದ್ರೋಹಿ ಎಂಬ ಪಟ್ಟ ಸಿಕ್ಕಿತ್ತು. ಹಾಗಾಗಿ ಆಕೆಯನ್ನು ಅಕೌಂಟೆಂಟ್ ಆಗಿ ನೋಂದಾಯಿಸಲು ಅವಕಾಶವಿರಲಿಲ್ಲ.

ಶಿವಭೋಗಂ ಇವರೆಲ್ಲರ ಲೆಕ್ಕಾಚಾಋವನ್ನು ತಲೆಕೆಳಗಾಗಿ ಮಾಡಿದ್ದರು. ಶಾಂತವಾಗಿ ಕುಳಿತು ತನ್ನ ಹಣೆಬರಹವನ್ನು ಇತರರ ಕೈಗೆ ಕೊಡದೆ ತಾವೇ ರೂಪಿಸಿಕೊಂಡ ಗಟ್ಟಿಗಿತ್ತಿ. ಕಾರಾಗೃಹದಲ್ಲಿದ್ದುಕೊಂಡೇ ಸಣ್ಣ ಯುದ್ಧಗಳನ್ನು ಎದುರಿಸಿ ಪುರುಷ ಭದ್ರಕೋಟೆಯನ್ನು ಪ್ರವೇಶಿಸುವ ಧೈರ್ಯಮಾಡಿದ್ದಳು.

ಸ್ವಾತಂತ್ರ್ಯಕ್ಕಾಗಿ ಇವರ ಹೋರಾಟ

ಶಿವಭೋಗಮ್ 23 ಜುಲೈ 1907 ರಂದು ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಟ್ರಿಪ್ಲಿಕೇನ್‌ನ ಲೇಡಿ ವಿಲಿಂಗ್ಡನ್ ಶಾಲೆಯಲ್ಲಿ ಪೂರ್ಣಗೊಳಿಸಿದರು ಮತ್ತು ಚೆನ್ನೈನ ಕ್ವೀನ್ ಮೇರಿ ಕಾಲೇಜಿನಲ್ಲಿ ಪದವಿ ಪಡೆದರು. ಆಕೆಯ ಪೋಷಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ, ಪ್ರವರ್ತಕ ಸಮಾಜ ಸುಧಾರಕರಾದ ಸೋದರಿ ಆರ್.ಎಸ್.ಸುಬ್ಬಲಕ್ಷ್ಮಿ ಅವರಿಂದ ಹೆಚ್ಚು ಪ್ರಭಾವಿತರಾಗಿದ್ದರು. ಸುಬ್ಬಲಕ್ಷ್ಮಿಯವರು ಗೃಹಿಣಿಯರಿಗೆ ಮತ್ತು ವಿಧವೆಯರಿಗೆ ತಮ್ಮನ್ನು ತಾವು ಹೆಚ್ಚು ಜಾಗೃತಗೊಳಿಸಲು ವೇದಿಕೆಯನ್ನು ಒದಗಿಸಿಕೊಟ್ಟವರು.

ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳಿಂದ ಪ್ರಭಾವಿತಳಾಗಿದ್ದು, ಕೇವಲ ಖಾದಿ ಧರಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಆಕೆ ಸರಳ ಜೀವನ ಎಲ್ಲರೂ ಮೆಚ್ಚುವಂಥದ್ದು. ಪ್ರತಿಯೊಬ್ಬ ಭಾರತೀಯರಂತೆ, ಅಸಹಕಾರ ಚಳವಳಿಯ ಕೂಗು ಅವಳ ಮನಸ್ಸನ್ನೂ ಕಲಕಿತು. ಯೂತ್ ಲೀಗ್ ಮತ್ತು ಸ್ವದೇಷಿ ಲೀಗ್‌ನ ಭಾಗವಾಗಿ, ಅವರು ಖಾದಿ ಆಧಾರಿತ ಬ್ಲಾಕ್ ಪ್ರಿಂಟಿಂಗ್ ಅನ್ನು ಕಲಿಸುವುದರಿಂದ ವಿದೇಶಿ ವಸ್ತುಗಳನ್ನು ಸಕ್ರಿಯವಾಗಿ ಬಹಿಷ್ಕರಿಸಿದರು. ಆಕೆಯ ಕಾರ್ಯಗಳಿಂದ ಮತ್ತಷ್ಟು ಜನ ಪ್ರಭಾವಿತರಾದ್ದರಿಂದ ವೆಲ್ಲೂರ್ ಗೋಲ್‌ನಲ್ಲಿ ಒಂದು ವರ್ಷ ಕಾರಾಗೃಹದಲ್ಲಿರಬೇಕಾಯಿತು.

ಜೈಲಿನಲ್ಲಿದ್ದಾಗಲೇ ಗ್ರಾಜುಯೇಟ್ ಡಿಪ್ಲೊಮಾ ಇನ್ ಅಕೌಂಟೆನ್ಸಿ (ಜಿಡಿಎ) ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು. ಆಕೆಯನ್ನು ಅಕೌಂಟೆನ್ಸಿ ಜಗತ್ತಿಗೆ ತಳ್ಳಿದ್ದು ಏನು ಎಂಬುದು ಅಸ್ಪಷ್ಟವಾಗಿದ್ದರೂ, ಪುರುಷ ಪ್ರಧಾನ ವೃತ್ತಿಯನ್ನು ಪ್ರವೇಶಿಸುವುದರಿಂದ ಆಕೆಯನ್ನು ನಿರಾಕರಿಸಲಾಗಿತ್ತು. ಅವರ ಅಕ್ಕ ಮತ್ತು ಸುಬ್ಬಲಕ್ಷ್ಮಿ ಮಾತ್ರ ಆಕೆಯ ನಿರ್ಧಾರವನ್ನು ಬೆಂಬಲಿಸಿದರು.

1933 ರಲ್ಲಿ ಶಿವಭೋಗಮ್ ಅವರು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಮತ್ತು ಇತಿಹಾಸವನ್ನು ಸೃಷ್ಟಿಸಲು ತೆಗೆದುಕೊಂಡಿರುವ ನಿರ್ಣಯ, ಕಠಿಣ ಪರಿಶ್ರಮ ಮತ್ತು ಅಪಾರ ಪ್ರಮಾಣದ ಧೈರ್ಯವನ್ನು ಯಾರೂ ಊಹಿಸಿರಲಿಲ್ಲ. ನಂತರ ಅವರು ಚೆನ್ನೈನಲ್ಲಿ ಆಡಿಟರ್ ಆಗಿರುವ ಸಿ ಎಸ್ ಶಾಸ್ತ್ರಿ ಅವರ ಬಳಿ ತರಬೇತಿಯನ್ನು ಪಡೆದರು.

ಆಕೆಗೆ ತನ್ನದೇ ಆದ ಅಭ್ಯಾಸವನ್ನು ಸ್ಥಾಪಿಸಲು ಅವಕಾಶ ನೀಡದಿದ್ದಕ್ಕೆ ಕಾನೂನನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ದಿಟ್ಟ ಮಹಿಳೆಯ ಹೋರಾಟದ ಫಲವಾಗಿ ಪ್ರಕರಣ ಗೆದ್ದು 1937 ರಲ್ಲಿ ತನ್ನ ಅಭ್ಯಾಸವನ್ನು ಪ್ರಾರಂಭಿಸಿದರು. ಮತ್ತು ಸರ್ಕಾರಿ ಸಂಸ್ಥೆಗಳು ಮತ್ತು ಸಾಮಾಜಿಕ ಸಂಸ್ಥೆಗಳ ಲೆಕ್ಕಪರಿಶೋಧನೆಯ ಮುಖ್ಯಸ್ಥರಾದರು. 1949 ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI)ನ ಸದಸ್ಯರಾದರು.

ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ ಅಧ್ಯಕ್ಷರಾಗಿ ಸತತ ಮೂರು ವರ್ಷಗಳ ಕಾಲ (1955 ರಿಂದ 1958) ಸೇವೆ ಸಲ್ಲಿಸಿದ ಮೊದಲ ಮತ್ತು ಏಕೈಕ ಮಹಿಳೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಲೆಕ್ಕಪರಿಶೋಧನೆ ನಡೆಸುವುದರ ಜೊತೆಗೆ, ಯುವತಿಯರಲ್ಲಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಪ್ರಯತ್ನಗಳನ್ನು ಮಾಡಿದರು. ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ತರಬೇತಿ ತರಗತಿಗಳನ್ನು ನೀಡಿದರು.

1956 ರಲ್ಲಿ, ಅವರು ಮೊದಲ ಸಿಟ್ಟಿಂಗ್‌ನಲ್ಲಿ ICAI ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅತ್ಯುತ್ತಮ ಮಹಿಳಾ ಅಭ್ಯರ್ಥಿಗಾಗಿ ಚಿನ್ನದ ಲಾಕೆಟ್ ರೂಪದಲ್ಲಿ ಪ್ರಶಸ್ತಿಯನ್ನು ಪರಿಚಯಿಸಿದರು. ಕೊನೆಗೆ 14 ಜೂನ್ 1966 ರಂದು ಕೊನೆಯುಸಿರೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!