ಧರ್ಮದ ಕಾರ್ಯ ನಿರಂತರವಾಗಿ ನಡೆಯಲಿ: ಲಕ್ಷ್ಮಣ ಸವದಿ

ಹೊಸ ದಿಗಂತ ವರದಿ, ಕಲಬುರಗಿ:

ಪರಂಪರೆಯಿಂದಲೂ ಎಸ್.ಬಿ.ಪಾಟೀಲ ಮನೆತನವು ಸಮಾಜ ಸೇವೆಯ ಮೂಲಕ ಹೆಸರುವಾಸಿಯಾಗಿದ್ದು, ಇದೀಗ ಅವರ ಕುಡಿಯಾಗಿರುವ ಚಂದು ಪಾಟೀಲ ಸಮಾಜ ಸೇವೆಯ ಮುಖಾಂತರ ಧರ್ಮದ ಕಾರ್ಯ ಮಾಡುತ್ತಿದ್ದು, ಈ ಕಾರ್ಯವು ನಿರಂತರವಾಗಿ ನಡೆಯಲಿ, ನಿಮ್ಮ ಮನೆತನಕ್ಕೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಅವರು ಕರ್ನಾಟಕ ನವಿಕರೀಸಬಹುದಾದ ಇಂಧನ ಅಭಿವೃದ್ದಿ ನಿಗಮ ಅಧ್ಯಕ್ಷರು ಬೆಂಗಳೂರ ಹಾಗೂ ಯುವ ಮುಖಂಡ ಚಂದು ಪಾಟೀಲ ಅವರ 42ನೇ ಹುಟ್ಟು ಹಬ್ಬದ ಅಂಗವಾಗಿ ಎಸ್.ಬಿ.ಪಾಟೀಲ ಫ್ಯಾಕ್ಟರಿ ಕಪನೂರ ಏರಿಯಾದಲ್ಲಿ ನಡೆದ 5001 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಸಮಾಜಿಕ ಕಳಕಳಿಯಿರುವ ಕಾರ್ಯಕ್ರಮ ಮಾಡುವುದು ಅತಿ ದೊಡ್ಡ ವಿಷಯ ಎಂದರು. ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಮೂರು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಹುಟ್ಟು-ಸಾವು-ಬದುಕು ಈ ಮೂರು ಸಂಗತಿಗಳನ್ನು ಅರ್ತೈಸಿಕೊಂಡ ವ್ಯಕ್ತಿಯ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಎಂದಿಗೂ ಬರುವುದಿಲ್ಲ ಎಂದರು. ಯಾರು ಇತರರ ಕಣ್ಣಲಿ ನೀರು ಬರಿಸುತ್ತಾರೆ ಅದು ಅಧರ್ಮ. ಇನ್ಯಾರ ಕಣ್ಣಲಿಯೂ ಸಹ ನೀರು ಬರದೇ ಹಾಗೇ ನೋಡಿಕೊಂಡು ಕಷ್ಟ ಕಾಲಕ್ಕೆ ಸಹಾಯವನ್ನು ಮಾಡುವುದೇ ನಿಜವಾದ ಧರ್ಮ ಎಂದು ಅಭಿಪ್ರಾಯಪಟ್ಟರು.

ಮುಂದಿನ ಬಾರಿ ನಡೆಯುವ 2023ರ ವಿಧಾನ ಸಭೆ ಚುನಾವಣೆಯಲ್ಲಿ ನೀವು ಮಾಡಿದ ಸಮಾಜ ಮುಖಿ ಸೇವೆ, ಧರ್ಮದ ಕಾರ್ಯಗಳೇ ನಿಮಗೆ ಶ್ರೀರಕ್ಷೆಯಾಗಲಿವೆ ಎಂದರು. ಕರ್ಮದಿಂದ ಸಂಪಾದನೆ ಮಾಡಿದ ಸಂಪತ್ತು ನಿಮ್ಮದು. ಆ ಸಂಪತ್ತನ್ನು ದಾನ-ಧರ್ಮಕ್ಕೆ ಮೀಸಲಿಟ್ಟಿದ್ದು ನಿಮ್ಮ ಮನೆತನದ ದೊಡ್ಡ ಗುಣವಾಗಿದೆ. ಮುಂಬರುವ ದಿನಗಳಲ್ಲಿ ನೀವು ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕೆಲಸ ಮಾಡಲು ದೇವರು ನಿಮಗೆ ಒಳ್ಳೆಯ ಸ್ಥಾನಮಾನ ನೀಡಲಿ ಎಂದು ಶುಭ ಹಾರೈಸಿದರು.

ಗೌರಿಗಧ್ಯೆ ದತ್ತಾಶ್ರಮದ ಅವಧೂತ ಶ್ರೀ ವಿನಯ್ ಗುರುಜೀ ಮಾತನಾಡಿ, 5001 ಮುತೈದೆಯರಿಗೆ ಉಡಿ ತುಂಬುವ ಕಾಯಕ ನಿಜಕ್ಕೂ ಒಳ್ಳೆಯದ್ದು. ಇಂದಿನ ಬದಲಾದ ಕಾಲಘಟ್ಟದಲ್ಲಿ ಹುಟು ಹಬ್ಬಗಳನ್ನು ಜನರು ಕೇಕ ಕತ್ತರಿಸುವ ಮೂಲಕ ಪಾಶ್ಚಾತ್ಯ ಸಂಸ್ಕೃತಿ ಪದ್ದತೀಯಂತೆ ಆಚರಿಸಿಕೊಳ್ಳುತ್ತಾರೆ. ಆದರೆ ಚಂದು ಪಾಟೀಲ ಅವರು 5001 ತಾಯಂದಿರ ಉಡಿ ತುಂಬುವ ಮೂಲಕ ಆಚರಣೆ ಮಾಡಿದ್ದು, ಮಹಾನ್ ಕಾರ್ಯವೆಂದರು. ತಾಯಿ ಪೂಜೆ ಆಗಬೇಕೆ ವಿನಹ: ನಾಯಿ ಪೂಜೆಯಾಗಬಾರದು ಎಂದು ಹಿತನುಡಿ ಹೇಳಿದರು. ಗುರು ಪರಂಪರೆಯಿರುವ ಮನೆತನದಲ್ಲಿ ಸಂಸ್ಕ್ರತಿವಿರುತ್ತದೆ. ಹಣ ಇದ್ದ ಮನೆಯಲ್ಲಿ ಮದವಿರಬಾರದು ಎಂದ ಅವರು, ಕಲ್ಲು ದೇವರಿಗೆ ಆಹಾರ ನೀಡುವ ಬದಲು ಕಣ್ಣಿರು ಒರೆಸುವ ಕೆಲಸ ಈ ಪರಿವಾರದಿಂದಾಗಲಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!