Sunday, July 3, 2022

Latest Posts

ಗಣೇಶೋತ್ಸವ ಆಚರಣೆಗೆ ನಿರ್ಬಂಧ: ಶ್ರೀರಾಮ ಸೇನೆ ಆಕ್ಷೇಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಶನಿವಾರಸಂತೆ:

ನೂರಾರು ವರ್ಷಗಳಿಂದ ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿರುವ ಗಣೇಶ ಚತುರ್ಥಿ ಹಬ್ಬವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಆಚರಿಸದಂತೆ ವಿಧಿಸಿರುವ ನಿಷೇಧವನ್ನು ಸರಕಾರ ತೆರವುಗೊಳಿಸಬೇಕು ಎಂದು ಶ್ರೀರಾಮ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ತನ್ಮಯ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಕೋವಿಡ್ ಪ್ರಕರಣ ಕಡಿಮೆಯಾಗುತ್ತಿದ್ದು, ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಆದರೂ ಸರಕಾರ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸದಂತೆ ನಿಷೇಧ ಮಾಡಿರುವುದು ಸರಿಯಲ್ಲ ಎಂದರು.
ಕೋವಿಡ್ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಗಣೇಶ ಮೂರ್ತಿ ತಯಾರಕರು, ಶಾಮಿಯಾನದವರು, ವಿದ್ಯುತ್ ದೀಪ ಅಲಂಕಾರದವರು, ವಾದ್ಯಗೋಷ್ಠಿ ತಂಡದವರು ಮುಂತಾದವರಿಗೆ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಯಿಂದ ಅನುಕೂಲವಾಗಲಿದೆ. ಆದರೆ ಸರಕಾರದ ನಿಷೇಧ ಕ್ರಮದಿಂದ ಅವರುಗಳ ಜೀವನಕ್ಕೂ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸರಕಾರ ಕೋವಿಡ್ ನಿಯಮ ಪಾಲನೆ ಮೂಲಕ ಮಾಲ್, ಚಿತ್ರ ಮಂದಿರ, ರಾಜಕಿಯ ಸಮಾವೇಶ, ಶಾಲಾ-ಕಾಲೇಜು ತೆರೆಯಲು, ದೇವಾಲಯ, ಧಾರ್ಮಿಕ ಕೇಂದ್ರ ತೆರೆಯಲು ಅವಕಾಶ ನೀಡಿದೆ. ಆದರೆ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಮಾತ್ರ ನಿಷೇಧ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರಕಾರ ಕೂಡಲೇ ಕೆಲವು ನಿರ್ಬಂಧಗಳನ್ನು ವಿಧಿಸಿ ಗಣೇಶ ಚತುರ್ಥಿಯ ಆಚರಣೆಗೆ ಅನುಮತಿ ನೀಡಬೇಕು.ಇಲ್ಲದಿದ್ದಲ್ಲಿ ಆ.30 ರಂದು ಮಡಿಕೇರಿ ಶಾಸಕರ ಕಚೇರಿ ಎದುರು ಶ್ರೀರಾಮ ಸೇನಾ ಸಂಘಟನೆ ವತಿಯಿಂದ ಧರಣಿ ಮೂಲಕ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಶ್ರೀರಾಮ ಸೇನಾ ಜಿಲ್ಲಾ ಘಟಕದ ಸಂಚಾಲಕರಾದ ಪ್ರಜ್ವಲ್, ಕೇಶವ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss