ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….
ಹೊಸ ದಿಗಂತ ವರದಿ, ಅಂಕೋಲಾ:
ಗಂಗಾವಳಿ ನದಿಯ ಪ್ರವಾಹದಿಂದ ಹಾನಿ ಉಂಟಾದ ಪ್ರದೇಶಗಳಿಗೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಭೇಟಿ ನೀಡಿ ಪ್ರವಾಹದಿಂದ ಸಮಸ್ಯೆಗೊಳಗಾದವರಿಗೆ ಸಾಂತ್ವನ ಹೇಳಿದರು.
ಅಗಸೂರು, ಸುಂಕಸಾಳ, ಬೆಳಸೆ, ಸಿಂಗನಮಕ್ಕಿ, ಮಂಜಗುಣಿ ಮೊದಲಾದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕಿ
ಹಾನಿಗೊಳಗಾದ ಪ್ರತಿಯೊಬ್ಬರಿಗೂ ನ್ಯಾಯಯುತವಾಗಿ ದೊರಕಬೇಕಾದ ಎಲ್ಲಾ ಸೌಲಭ್ಯಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ಧಾರ ಉದಯ ಕುಂಬಾರ ಅವರಿಗೆ ಸೂಚಿಸಿದರು.
ಕಳೆದ ಬಾರಿ ಅನೇಕ ಜನರು ಸಿಗಬೇಕಾದ ಪರಿಹಾರದಿಂದ ವಂಚಿತರಾಗಿದ್ದಾರೆ ಈ ಬಾರಿ ಅದಕ್ಕೆ ಅವಕಾಶ ನೀಡದೇ ಹಾನಿಯ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅವರು ಹೇಳಿದರು.
ನೀರು ತುಂಬಿಕೊಂಡಿರುವ ಕಾರಣ ರಸ್ತೆ ಸಂಪರ್ಕ ಇಲ್ಲದೇ ಶಿರೂರು ಸೇರಿದಂತೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ ಆದರೆ ಪ್ರತಿಯೊಬ್ಬ ನೊಂದ ಪ್ರವಾಹ ಪೀಡಿತರೊಂದಿಗೆ ತಾವಿದ್ದು ಯಾರಿಗೂ ಅನ್ಯಾಯ ಆಗಲು ಅವಕಾಶ ನೀಡುವುದಿಲ್ಲ ಎಂದರು.
ರಕ್ಷಣಾ ಕೇಂದ್ರದಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಉತ್ತಮವಾದ ಪೌಷ್ಠಿಕ ಊಟ, ಮಕ್ಕಳಿಗೆ ಹಾಲು ನೀಡುವ ವ್ಯವಸ್ಥೆ ಮಾಡಬೇಕು ಎಂದು ಅವರು ತಹಶೀಲ್ಧಾರ ಉದಯ ಕುಂಬಾರ ಅವರಿಗೆ ಸೂಚಿಸಿದರು.
ತಾಲೂಕಿನ ಬೆಳಸೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿರುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ ಐ.ಆರ್.ಬಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕೂಡಲೇ ಪರಿಹಾರ ಕಂಡು ಕೊಳ್ಳುವಂತೆ ಉಪ ವಿಭಾಗ ಅಧಿಕಾರಿ ರಾಹುಲ್ ರತ್ನಮ್ ಪಾಂಡೆ ಅವರೊಂದಿಗೆ ಚರ್ಚೆ ನಡೆಸಿದರು.
ಮಂಜಗುಣಿಗೆ ಭೇಟಿ ನೀಡಿದ ಸಂದರ್ಭ ಶಾಲೆಯಲ್ಲಿನ ಗಂಜಿ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆದಾಗ
ಕೂಡಲೇ ವಿದ್ಯುತ್ ಸಂಪರ್ಕಕ್ಕೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ ಅವರಿಗೆ ಸೂಚಿಸಿದರು.
ಮಂಜಗುಣಿ ನೂತನ ಸೇತುವೆಯ ಅಸಮರ್ಪಕ ಕಾಮಗಾರಿಯಿಂದ ಊರಿಗೆ ನೀರು ನುಗ್ಗುವಂತಾಗಿದೆ ಎಂದು ಕೆಲವು ಗ್ರಾಮಸ್ಥರು ಆರೋಪಿಸಿದರು.
ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ ಉಪಸ್ಥಿತರಿದ್ದರು.