ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಡ್ಯ:
ಪ್ರಿಯಕರನ ಹತ್ಯೆಯಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ನಗರದ ಬಾಲಕಿಯರ ಬಾಲ ಮಂದಿರಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಬಾಲ ಮಂದಿರದಲ್ಲಿ ಪ್ರತಿಯೊಬ್ಬ ಬಾಲಕಿಯನ್ನೂ ಕರೆದು ವಿಚಾರಣೆ ನಡೆಸಿ ಮಾನ್ವಿತ ಸಾವಿನ ಹಿಂದಿರುವ ಸತ್ಯದ ಶೋಧನೆಯಲ್ಲಿ ತೊಡಗಿದ್ದರು.
ಸುಮಾರು 1 ಗಂಟೆ ಸುಮಾರಿಗೆ ಬಾಲಮಂದಿರಕ್ಕೆ ಆಗಮಿಸಿದ್ದ ಆಯೋಗದ ಅಧ್ಯಕ್ಷ ಡಾ. ಆಂಟೋನಿ ಸಬಾಸ್ಟಿಯನ್ ಹಾಗೂ ಸದಸ್ಯ ಪರಶುರಾಂ ಅವರು ಘಟನೆಗೆ ಸಂಬಂಧಿಸಿದಂತೆ ಬಾಲಮಂದಿರದ ಎಲ್ಲ ಅಧಿಕಾರಿ, ಸಿಬ್ಬಂದಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದರು.
ಆತ್ಮಹತ್ಯೆಗೂ ಮುನ್ನ ಬಾಲಕಿ ಬರೆದ ಡೆತ್ನೋಟ್ ವಿಚಾರಕ್ಕೆ ಸಂಬಂಧಸಿದಂತೆ ಪೊಲೀಸರಿಂದ ಮಾಹಿತಿ ಪಡೆದರು. ಬಾಲಮಂದಿರದಲ್ಲಿ ಇರುವ ಬಾಲಕಿಯರ ಸಂಬಂಧಿಕರಿಂದಲೂ ಅಹವಾಲುಗಳನ್ನು ಆಲಿಸಿದರು.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಬಾಲ ಮಂದಿರದಲ್ಲಿ ಸಾಕಷ್ಟು ಲೋಪದೋಷಗಳೂ ಕಂಡುಬಂದಿವೆ. ಇದೊಂದು ಸೂಕ್ಷ್ಮ ವಿಚಾರವಾಗಿದೆ. ಈ ಬಗ್ಗೆ ಬಹಿರಂಗಪಡಿಸಲಾಗದು. ಇನ್ನೆರಡು ಮೂರು ದಿನಗಳಲ್ಲಿ ಪರಿಶೀಲನೆ ನಡೆಸಿ ಸತ್ಯಾಂಶದ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.