ರಂಗದಲ್ಲಿ ಪ್ರಜ್ವಲಿಸಲಿದೆ ಕಿತ್ತೂರು ವೈಭವ..!

– ಮಹಾಂತೇಶ ಕಣವಿ

ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿ, ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದ ಕಿತ್ತೂರು ಸಂಸ್ಥಾನದ ವೈಭವ, ಜೊತೆಗೆ ಚೆನ್ನಮ್ಮನ ಸಾಹಸಗಾಥೆ ಬಿಚ್ಚಿಡುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ. ಇಂತಹ ವಿನೂತನ ಪ್ರಯೋಗಕ್ಕೆ ಧಾರವಾಡ ರಂಗಾಯಣ ಸಜ್ಜಾಗಿದೆ.
ಹೌದು, ಮಹಾರಾಷ್ಟ್ರದ ಜಾಣತಾ-ರಾಜಾ ನಾಟಕ ಮಾದರಿಯಲ್ಲಿಯೇ ಕಿತ್ತೂರು ಚೆನ್ನಮ್ಮನ ನಾಟಕ ರಂಗದಲ್ಲಿ ರಾರಾಜಿಸಲು ಸಿದ್ಧವಾಗಿದೆ. 150ಕ್ಕೂ ಹೆಚ್ಚು ಕಲಾವಿದರು ಈ ಪಾತ್ರಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನದಿಂದ ಕಲಾವೈಭವ ತೆರೆದಿಡಲು ಸಿದ್ಧತೆ ನಡೆದಿರುವುದು ವೈಶಿಷ್ಟ್ಯ.

ನಿರ್ದೇಶಕರ ಕನಸು:
ರಂಗಾಯಣ ನಿರ್ದೇಶಕ ಸಾರಥ್ಯ ರಮೇಶ ಪರವಿನಾಯ್ಕರ ಹೆಗಲೇರಿದ ಬಳಿಕ ಬಹಳಷ್ಟು ಕ್ರಿಯಾಶೀಲವಾಗಿದೆ. ಅಲ್ಲದೇ, ಈ ಕಿತ್ತೂರು ಚೆನ್ನಮ್ಮನ ಬೃಹನ್ನಾಟಕ ನಿರ್ದೇಶಕರ ಕನಸಿನ ಕೂಸು ಎಂಬುದು ಮತ್ತೊಂದು ವಿಶೇಷ.

ಹಣ ಬಿಡುಗಡೆ:
ಸುಮಾರು ಒಂದು ಎಕರೆಗೂ ಅಧಿಕ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧತೆ ಈ ನಾಟಕದ ಬೇಡಿಕೆ. ಸುಮಾರ ರೂ.2.80 ಕೋಟಿ ವೆಚ್ಚದಲ್ಲಿ ನಾಟಕದ ರೂಪರೇಷೆ ಸಿದ್ಧಪಡಿಸಿದ್ದಾರೆ. ಸರ್ಕಾರ ಈಗಾಗಲೇ ರೂ.70 ಲಕ್ಷ ಅನುದಾನ ನೀಡಿದ್ದು, ಉಳಿದ ಹಣ ಶೀಘ್ರ ಬಿಡುಗಡೆ ಮಾಡಬೇಕಿದೆ.

25 ಪ್ರಯೋಗ ಬುಕ್:
ಮೊದಲ ಪ್ರಯೋಗ ಸಂಗ್ರಾಮ ನಡೆದ ಕಿತ್ತೂರು ಕೋಟೆಯಲ್ಲಿಯೇ ನಡೆಸುವುದು ವಿಶೇಷ. ದ್ವಿತೀಯ ಪ್ರಯೋಗ ಚೆನ್ನಮ್ಮನ ಸಮಾ ಸ್ಥಳ ಬೈಲಹೊಂಗಲದಲ್ಲಿ, ತೃತೀಯ ಬೆಳಗಾವಿ ಕೋಟಿ, ನಂತರ ಧಾರವಾಡ, ಹುಬ್ಬಳ್ಳಿ, ಕಲ್ಬುರ್ಗಿ ಸೇರಿ 25 ಪ್ರಯೋಗ ಈಗಾಗಲೇ ಬುಕ್ ಆಗಿವೆ.

ಬೃಹತ್ ಕೋಟೆ:
150*120 ಅಡಿ ಉದ್ದಗಲ, 25 ಅಡಿ ಎತ್ತರದ ಕೋಟೆ ಸೆಟ್ ರೂಪದಲ್ಲಿ ನಿರ್ಮಿಸಲಿದೆ. 250ಸ್ಪಾಟ್ಲೈಟ್ಗಳು, ಪ್ರೇಕ್ಷಕರನ್ನು ತಲುಪಲು 10 ಸಾವಿರ ಧ್ವನಿವರ್ಧಕಗಳು ಇರಲಿವೆ. ಜೀವಂತ ಆನೆ-ಕುದುರೆಗಳು ರಾರಾಜಿಸಿ, ಕಿತ್ತೂರು ವೈಭವ ಕಣ್ಣಿಗೆ ರಾಚುವಂತೆ ಈ ನಾಟಕ ಮಾಡಲಿದೆ.

ರಾಜ್ಯೋತ್ಸವಕ್ಕೆ ತೆರೆಗೆ:
ಮುಂಬರುವ ಕನ್ನಡ ರಾಜ್ಯೋತ್ಸವದ ವೇಳೆಗೆ ಕನಸಿನ ಕೂಸು ಕಿತ್ತೂರು ಚೆನ್ನಮ್ಮ ನಾಟಕ ತೆರೆಗೆ ತರುವಲ್ಲಿ ಪ್ರಯತ್ನ ನಡೆಯುತ್ತಿದೆ. ನಾಟಕಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗದಂತೆ ಈ ಭಾಗದ ರಂಗಕರ್ಮಿಗಳು ಮುಖ್ಯಮಂತ್ರಿಗೆ ಮನವಿ ಮಾಡಬೇಕೆಂಬುದು ನಿರ್ದೇಶಕರ ಕೋರಿಕೆ.

ಸೃಜನಶೀಲತೆಗೆ ಸಾಕ್ಷಿ:
ಸಂಶೋಧಕ ಡಾ.ವೀರಣ್ಣ ರಾಜೂರ ಮಾರ್ಗದರ್ಶನ ಹಾಗೂ ರಮೇಶ ಪರವಿನಾಯ್ಕರ ನಿರ್ದೇಶನದಲ್ಲಿ ತಯಾರಿಸಲ್ಪಡುವ ನಾಟಕಕ್ಕೆ ಡಾ.ಬಾಳ್ಳಣ್ಣ ಶೀಗಿಹಳ್ಳಿ, ಕೆ.ಎಚ್.ನಾಯಕ, ರಂಗಕರ್ಮಿಗಳಾದ ವಿಠ್ಠಲ ಕೊಪ್ಪದ, ಶಶೀಧರ ನರೇಂದ್ರ ತಮ್ಮ ಸೃಜನಶೀಲತೆ ನಾಟಕ್ಕೆ ತುಂಬಿದ್ದಾರೆ.

ಕಲೆಗಳ ಅನಾವರಣ
ಕಿತ್ತೂರು ಚನ್ನಮ್ಮ ನಾಟಕದಲ್ಲಿ ಹೋರಾಟ ಮಾತ್ರವದಲ್ಲದೇ, ಕಿತ್ತೂರು ವೈಭವ, ಕಲೆಗಳು ಅನಾವಣಗೊಳ್ಳಲಿವೆ. ಚೌಡಕಿಪದ, ಗೀಗೀಪದ, ಲಾವಣಿ, ಸಾಂಬಾಳ, ಕರಡಿಮಜಲು, ನೃತ್ಯ, ವಿಭಿನ್ನ ಕಲೆಗಳು ಗೋಚರಿಸಲಿವೆ. ಈ ನಾಟಕ ನೋಡುಗರಿಗೆ ನಯನ ಮನೋಹರ ದೃಶ್ಯ ನೀಡಲಿದೆ.

“ಲಂಡನ್ನ ಬ್ರಿಟಿಷ್ ದಾಖಲೆ, ತಜ್ಞರೊಂದಿಗೆ ಚರ್ಚಿಸಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಈ ನಾಟಕ ನಾಡಿನ ಜನರ ಮನಸ್ಸು ಗೆಲ್ಲುತ್ತದೆ. ಸರ್ಕಾರಿ ನಾಟಕದ ಬಾಕಿ ಹಣ ಬಿಡುಗಡೆ ಮಾಡಬೇಕಿದೆ. -ರಮೇಶ ಪರವಿನಾಯ್ಕರ, ಧಾರವಾಡ ರಂಗಾಯಣ ನಿದೇರ್ಶಕರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!