ಏನೇ ಆದರೂ ಮೇಕೆದಾಟು ಪಾದಯಾತ್ರೆ ನಿಲ್ಲುವುದಿಲ್ಲ: ಡಿ.ಕೆ.ಶಿ.‌

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ನನ್ನ ಪ್ರಾಣ ಹೋದರೂ ಸರಿ, ರಾಜ್ಯದ ಜನರ ಕುಡಿಯುವ ನೀರಿಗಾಗಿ ಮಾಡುತ್ತಿರುವ ಮೇಕೆದಾಟು ನಡಿಗೆಯನ್ನು ಮಾಡಿಯೇ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುನರುಚ್ಛರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಪಾದಯಾತ್ರೆ ಮೊಟಕುಗೊಳಿಸಲು ಷಡ್ಯಂತ್ರ ರೂಪಿಸುತ್ತಿದೆ. ಬಿಜೆಪಿ ಸರಕಾರ ಕೀಳು ರಾಜಕೀಯಕ್ಕಾಗಿ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಉತ್ಪ್ರೇಕ್ಷೆಯಿಂದ ಕೋವಿಡ್ ಸಂಖ್ಯೆ ಹೆಚ್ಚಳ ಮಾಡಿ, ರಾಜ್ಯದಲ್ಲಿ ನಿರ್ಬಂಧ ಹೇರಿದೆ. ಕುಡಿಯುವ ನೀರಿಗಾಗಿ ನಡೆಯುವ ಪಾದಯಾತ್ರೆಗೆ ಸಿಗುತ್ತಿರುವ ವ್ಯಾಪಕ ಬೆಂಬಲ ಸಹಿಸಲಾಗದೇ ಚುನಾವಣೆಯಲ್ಲಿನ ಸೋಲು ಅರಗಿಸಿಕೊಳ್ಳಲು ಆಗದೇ ನಮ್ಮ ಯಾತ್ರೆ ತಡೆಯಲು ಸಂಚು ರೂಪಿಸಿದ್ದಾರೆ. ಯೂರೋಪ್ ರಾಷ್ಟ್ರಗಳಲ್ಲಿ, ಅಮೆರಿಕದಲ್ಲಿ ಲಕ್ಷಾಂತರ ಕೋವಿಡ್ ಪ್ರಕರಣ ಇದ್ದರೂ ಯಾವುದೇ ನಿರ್ಬಂಧ ಇಲ್ಲ. ಕೇವಲ ಮಾಸ್ಕ್, ಸ್ಯಾನಿಟೈಸರ್, ಸುರಕ್ಷಿತ ಅಂತರ ಕಾಯ್ದುಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ರಾಷ್ಟ್ರವ್ಯಾಪಿ ಕಾರ್ಯಕ್ರಮ, ಸಭೆಗಳನ್ನು ಮಾಡುತ್ತಿದ್ದರೂ ಯಾವುದೇ ನಿರ್ಬಂಧವಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ವಿಶೇಷ ಬಿಜೆಪಿ ಕರ್ಫ್ಯೂ ಹಾಕಿದ್ದಾರೆ. ಇಡೀ ವರ್ತಕರ ಸಮುದಾಯ, ಸಾರ್ವಜನಿಕರಿಗೆ ತೊಂದರೆ ಕೊಟ್ಟು ಸಂತೋಷ ಪಡುವ ಕಾರ್ಯಕ್ರಮವನ್ನು ಸರಕಾರ ರೂಪಿಸಿದೆ. ನಮ್ಮ ಕಾರ್ಯಕ್ರಮ ಮೊಟಕುಗೊಳಿಸಲು, ಯಾರಿಗೂ ರೂಮ್ ಕೊಡಬೇಡಿ, ಹೊಟೇಲ್, ರೆಸ್ಟೋರೆಂಟ್ ಮುಚ್ಚಿಸಿ ಎಂದು ಜಿಲ್ಲಾಧಿಕಾರಿಗಳ ಮೂಲಕ ವಿಶೇಷ ಆದೇಶ ಹೊರಡಿಸಿದ್ದಾರೆ. ನಮ್ಮ ರಾಮನಗರದ ಜಿಲ್ಲಾಧಿಕಾರಿಗಳ ಮೂಲಕ ಮೇಕೆದಾಟು, ಚುಂಚಿ ಫಾಲ್ಸ್, ಕೆಲವು ಬೆಟ್ಟ, ಸಂಗಮ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಯಾರೂ ಹೋಗದಂತೆ ಆದೇಶ ಹೊರಡಿಸಿದ್ದಾರೆ ಎಂದು ಟೀಕಿಸಿದರು.

ಒಮಿಕ್ರಾನ್ ಅಲ್ಲ ಬಿಜೆಪಿಯ ಕಾಯಿಲೆ
ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಇಂತಹ ಕ್ಷುಲ್ಲಕ ರಾಜಕಾರಣ ಮಾಡಬೇಡಿ. ರಾಜಕಾರಣ ಮಾಡುವ ಸಮಯದಲ್ಲಿ ಮಾಡೋಣ. ರಾಜ್ಯದ ಎಲ್ಲ ಹೊಟೇಲ್, ವ್ಯಾಪಾರ ವಹಿವಾಟು ಮುಚ್ಚಿಸುವ ನಿಮ್ಮ ನಿರ್ಬಂಧ ಸರಿಯಲ್ಲ. ಇದು ಒಮಿಕ್ರಾನ್ ಅಲ್ಲ, ಇದು ಬಿಜೆಪಿಯ ಕಾಯಿಲೆ. ನಿಮ್ಮ ಹೆಸರಿನ ಮುಂದೆ ಇರುವ ಕರ್ಫ್ಯೂ. ಇದನ್ನು ಮಾಡಬೇಡಿ. ಸಾರ್ವಜನಿಕರ ಬದುಕಿಗೆ ಅವರ ವಹಿವಾಟಿಗೆ ತೊಂದರೆ ಮಾಡಬೇಡಿ. ಜಿಲ್ಲಾಧಿಕಾರಿಗಳ ಮೂಲಕ ಹೊರಡಿಸಿರುವ ಆದೇಶ ಹಿಂಪಡೆಯಿರಿ ಎಂದು ಮನವಿ ಮಾಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಪಾದಯಾತ್ರೆ ಹಿನ್ನೆಲೆಯಲ್ಲಿ ನಾವು 15 ದಿನ, ಒಂದು ವಾರ ಮುಂಚಿತವಾಗಿ ರಾಮನಗರದ ಎಲ್ಲ ರೆಸಾರ್ಟ್, ಹೊಟೇಲ್ ಗಳಲ್ಲಿ ಕೊಠಡಿ ಕಾಯ್ದಿರಿಸಿದ್ದೇವೆ. ನಾನು, ಶಾಸಕಾಂಗ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರು ಹಿಂದಿನ ದಿನ ಹೋಗಿ ಸಂಗಮದಲ್ಲಿರುವ ಜಾಗದಲ್ಲಿ ಉಳಿದುಕೊಂಡು ಮರುದಿನ ಪಾದಯಾತ್ರೆ ಆರಂಭಿಸಲು ತೀರ್ಮಾನಿಸಿದ್ದೆವು. ಈಗ ಅವರಿಗೂ ಹೆದರಿಸಿ ನೀವು ಯಾರೂ ಹೊಟೇಲ್ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ. ಸರಕಾರ ನಮಗೆ ಜಾಗ ನೀಡದಿದ್ದರೂ ಪರ್ವಾಗಿಲ್ಲ, ಹೊಳೆ, ನದಿ ಪಕ್ಕ ಮರಗಳ ಕೆಳಗೆ ಹಾಸಿಗೆ ಹಾಕಿಕೊಂಡು ಮಲಗುತ್ತೇವೆ. ಆದರೆ ನಿಮ್ಮ ರಾಜಕಾರಣಕ್ಕಾಗಿ ಇಡೀ ರಾಜ್ಯದ ಜನರಿಗೆ ತೊಂದರೆ ಯಾಕೆ ನೀಡುತ್ತಿದ್ದೀರಿ? ಕೂಲಿ ಕಾರ್ಮಿಕರ ಪರಿಸ್ಥಿತಿ ಏನಾಗಬೇಕು. ಚಾಲಕರ ಪರಿಸ್ಥಿತಿ ಏನಾಗಬೇಕು? ಅವರ ಬದುಕು ಏನಾಗಬೇಕು? ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ನೀವು ನಿಲ್ಲಿಸಿದಲ್ಲಿಂದಲೇ ನಡೆಯುತ್ತೇನೆ
ಸರಕಾರ ಯಾರನ್ನಾದರೂ ಬಂಧಿಸಲಿ, ಏನಾದರೂ ಮಾಡಿಕೊಳ್ಳಲಿ. ನಿಮಗೆ ಕಾನೂನು, ಸಂವಿಧಾನ, ಪ್ರಜಾಪ್ರಭುತ್ವದ ಹಕ್ಕುಗಳು, ಹೋರಾಟದ ಮೇಲೆ ಗೌರವಿಲ್ಲ. ನಿಮಗೆ ನೀತಿ, ಸಂಸ್ಕೃತಿ ಇಲ್ಲ. ನಾವು ನಡೆಯುತ್ತೇವೆ. ಯಾರೂ ಇಲ್ಲದಿದ್ದರೂ ನಾವಿಬ್ಬರೇ ನಡೆಯುತ್ತೇವೆ. ನಾವು ರಾಜ್ಯದ ಎಲ್ಲ ಸಂಘ ಸಂಸ್ಥೆಗಳಿಗೆ, ಧರ್ಮಗುರುಗಳಿಗೆ, ಪಕ್ಷದ ನಾಯಕರಿಗೆ, ವರ್ಗದವರಿಗೆ ಪಕ್ಷಾತೀತವಾಗಿ ಆಹ್ವಾನ ನೀಡಿದ್ದೇವೆ. ನೀವು ಕೇವಲ ಒಂದು ದಿನ ಮಾತ್ರ ಬಂಧಿಸಬಹುದು. ಮರುದಿನ ಅದು ನಿಮ್ಮಿಂದ ಸಾಧ್ಯವಿಲ್ಲ. ನೀವು ಬಂಧಿಸಿದರೂ ನಾವು ಹೆದರುವುದಿಲ್ಲ. ಮರುದಿನ ಕರ್ಫ್ಯೂ ಇಲ್ಲ, ನೀವು ಎಲ್ಲಿ ನಿಲ್ಲಿಸಿರುತ್ತೀರೋ ಅಲ್ಲಿಂದಲೇ ನಡೆಯುತ್ತೇನೆ. ನನ್ನ ಮನೆ, ನನ್ನ ಊರು, ನನ್ನ ಕ್ಷೇತ್ರ, ನನ್ನ ರಾಜ್ಯ. ಯಾರೂ ಈ ಪಾದಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಸರಕಾರದ ನಡೆ ವಿರುದ್ಧ ನಡಿಗೆ
ಸರಕಾರ ಏನೇ ಹೊಟೇಲ್ ಬಂದ್ ಮಾಡಿಸಿದರೂ ಪಾದಯಾತ್ರೆಗೆ ಐದು ಸಾವಿರವಲ್ಲ ಹತ್ತು ಸಾವಿರ ಜನ ಬಂದರೂ ಅವರಿಗೆ, ಪೊಲೀಸರಿಗೆ ಸೇರಿ ಎಲ್ಲರಿಗೂ ಉಳಿದುಕೊಳ್ಳುವ ಹಾಗೂ ಊಟದ ವ್ಯವಸ್ಥೆ ಮಾಡುವ ಶಕ್ತಿ ನನ್ನ ಕ್ಷೇತ್ರದ ಜನತೆಗೆ ಇದೆ. ನಾವು ಪೊಲೀಸರಿಗೆ, ಮಾಧ್ಯಮದವರಿಗೂ ಕೊಠಡಿ ಬುಕ್ ಮಾಡಿದ್ದರೂ ಅದನ್ನು ನೀಡಬಾರದು ಎಂದು ಹೇಳಿದ್ದಾರೆ. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಈ ಹೋರಾಟದಲ್ಲಿ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ. ನಾವು ನೀರಿಗಾಗಿ ನಡೆಯುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ಜನರ ಕುಡಿಯುವ ನೀರಿಗೆ ನಮ್ಮ ಹೊರಾಟ. ನಮ್ಮ ಸರಕಾರ ಡಿಪಿಆರ್ ಮಾಡಿದ್ದು, ನಾನು ಕೊಟ್ಟ ಡಿಪಿಆರ್ ಗೆ ಕೇಂದ್ರ ಸರಕಾರ ಪ್ರಾಥಮಿಕ ಒಪ್ಪಿಗೆ ನೀಡಿದೆ. ಕೇವಲ ಪರಿಸರ ಇಲಾಖೆ ಅನುಮತಿ ಪಡೆದು ಕೆಲಸ ಆರಂಭಿಸಲಿ. ಕಳೆದ ಎರಡುವರೆ ವರ್ಷದಿಂದ ಇದನ್ನು ಮಾಡಲು ಈ ಸರಕಾರ ವಿಫಲವಾಗಿದೆ. ಇದನ್ನು ಒತ್ತಾಯಿಸಲು ಈ ಯಾತ್ರೆ ಕೈಗೊಂಡಿದ್ದು, ಇದನ್ನು ಹತ್ತಿಕ್ಕಲು ನಿಮ್ಮಿಂದ ಸಾಧ್ಯವಿಲ್ಲ. ನಾವು ಹೋರಾಟ ಮಾಡಿಯೇ ಸಿದ್ಧ ಎಂದರು.

ರಾಮನಗರದಲ್ಲಿ ಮಾತ್ರ ವಿಶೇಷ ನಿರ್ಬಂಧ
ಇಂದು ರಾಮನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರೆ ಯಾವುದೇ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ಹಾಕಿಲ್ಲ. ಕೇವಲ ರಾಮನಗರದ ಸಂಗಮ, ಮೇಕೆದಾಟಿನಲ್ಲಿ ಮಾತ್ರ ನಿರ್ಬಂಧ. ಹೊರಗಿನಿಂದ ಬಂದ ಪ್ರವಾಸಿಗರ ಪರಿಸ್ಥಿತಿ ಏನು? ಹೊಟೇಲ್ ಬಂದ್ ನಿಂದ ಎಷ್ಟು ವ್ಯಾಪಾರ ವಹಿವಾಟಿಗೆ, ಎಷ್ಟು ಕಾರ್ಮಿಕರಿಗೆ ತೊಂದರೆಯಾಗುತ್ತದೆ ಎಂದು ತಿಳಿದಿದೆಯೇ? ಬಿಜೆಪಿ ಈ ದೇಶವನ್ನು, ರಾಜ್ಯದ ಗೌರವವನ್ನು ಹಾಳು ಮಾಡುತ್ತಿದೆ. ಸರಕಾರದ ವ್ಯವಸ್ಥೆ ಹಾಳುಮಾಡುತ್ತಿದ್ದು, ಇದನ್ನು ಖಂಡಿಸಿ, ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಡಿಕೆಶಿ ಹೇಳಿದರು.

ಪಾದಯಾತ್ರೆಯನ್ನು ನಾವು ಕೋವಿಡ್ ಮಾರ್ಗಸೂಚಿಯ ಎಲ್ಲ ನಿಯಮವನ್ನು ಪಾಲಿಸಿಕೊಂಡು ಮಾಡುತ್ತೇವೆ. ನಾನು ಪಕ್ಷದ ಅದ್ಯಕ್ಷನಾಗಿ ಪಕ್ಷವನ್ನು ಪ್ರತಿನಿಧಿಸುತ್ತೇನೆ. ಸಿದ್ದರಾಮಯ್ಯ ಅವರು 100 ಶಾಸಕರು ಹಾಗೂ ಪರಿಷತ್ ಸದಸ್ಯರನ್ನು ಪ್ರತಿನಿಧಿಸುತ್ತಾರೆ. ನಾವಿಬ್ಬರೇ ನಡೆಯುತ್ತೇವೆ. ನಮ್ಮ ಹೆಣ ಹೊರಲು ನಾಲ್ಕೈದು ಜನ ಇದ್ದಾರೆ. ಇವರು ಹೆಣಾನೂ ಹೊರುತ್ತಾರೆ, ಪಲ್ಲಕ್ಕಿಯನ್ನೂ ಹೊರುತ್ತಾರೆ. ಅದನ್ನೆಲ್ಲ ತೋರಿಸಲು ಮಾಧ್ಯಮದವರಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!