Monday, January 30, 2023

Latest Posts

ಮೇಕೆದಾಟು ಹೋರಾಟ ರಾಜಕೀಯ ಷಡ್ಯಂತ್ರ: ಶಾಸಕ ಕಾಮತ್

ಹೊಸದಿಗಂತ ವರದಿ,ಮಂಗಳೂರು:

ಮೇಕೆದಾಟು ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಏರ್ಪಡಿಸಿದ ಪಾದಯಾತ್ರೆ ಸಂಪೂರ್ಣ ರಾಜಕೀಯ ಗಿಮಿಕ್ ಆಗಿದ್ದು, ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸಿಗರು ಹೆಣೆದ ಷಡ್ಯಂತ್ರದ ಭಾಗ ಇದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಹೋರಾಟ ನಡೆಸಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ತಂಡ ನ್ಯಾಯಾಂಗ ವ್ಯವಸ್ಥೆಗೆ ಗೌರವ ಕೊಟ್ಟು ಮುಂದುವರಿಯಬೇಕಿತ್ತು. ಆದರೆ ಇದು ಗೊತ್ತಿದ್ದು ಪಾದಯಾತ್ರೆ ನಡೆಸಿ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರಿ ಗೊಂದಲ ಸೃಷ್ಟಿಗೆ ಕಾರಣರಾಗಿದ್ದಾರೆ. ಇದಕ್ಕೆ ನಾಡಿನ ಜನರು ಕಾಂಗ್ರೆಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜಧಾನಿ ಬೆಂಗಳೂರು ಹಾಗೂ ಇತರೆಡೆಗೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರನ್ನು ಒದಗಿಸಿ ಕೊಡುವುದು ರಾಜ್ಯ ಸರಕಾರದ ಜವಾಬ್ದಾರಿ. ಅದನ್ನು ಮಾಡಿಸಲು ನಮ್ಮ ಸರಕಾರ ಬದ್ಧವಾಗಿದೆ. ಮೇಕೆದಾಟು ವಿಚಾರವಾಗಿ ತಮಿಳುನಾಡು ಸರಕಾರ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಯೋಜನೆ ಜಾರಿಗೆ ತೊಡಕಾಗಿದೆ. ಸಾಧ್ಯವಾದರೆ ಡಿಕೆಶಿ ಮತ್ತವರ ಬಳಗ ತಮಿಳುನಾಡಿಗೆ ಹೋಗಿ ಅಲ್ಲಿನ ಸರಕಾರವನ್ನು ಮನವೊಲಿಸುವ ಕೆಲಸ ಮಾಡಲಿ. ಅದು ಬಿಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕಾಗಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಬೇಡಿ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!