Sunday, April 11, 2021

Latest Posts

ಅಂತರ್‌ನಿಗಮ ವರ್ಗಾವಣೆಗೆ ಸರಕಾರ ಅಸ್ತು : ಮಂಗಳೂರು, ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಎದುರಾಗಲಿದೆ ಸಿಬ್ಬಂದಿಗಳ ಕೊರತೆ

ದಿಗಂತ ವರದಿ, ಪುತ್ತೂರು:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಅಂತರ್‌ನಿಗಮ ವರ್ಗಾವಣೆಗೆ ರಾಜ್ಯ ಸರಕಾರ ಮತ್ತು ಸಂಸ್ಥೆ ಸಮ್ಮತಿಸಿದೆ. ಈ ಪದ್ಧತಿ ಅನುಷ್ಠಾನಗೊಂಡರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿರುವ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಚಾಲಕ ಮತ್ತು ನಿರ್ವಾಹಕರ ಹಾಗೂ ವರ್ಕ್‌ಶಾಪ್ ಸಿಬ್ಬಂದಿ ಹುದ್ದೆಗಳ ಕೊರತೆ ಉಂಟಾಗುವ ಸಾಧ್ಯತೆ ಎದುರಾಗಲಿದೆ. ಅಲ್ಲದೇ ಬಸ್‌ಗಳ ಸಂಚಾರದಲ್ಲೂ ಸ್ವಲ್ಪ ಸಮಯ ವ್ಯತ್ಯಯ ಉಂಟಾಗಲಿದೆ.

ವಾಸ್ತವ ಸತ್ಯ..
ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಮತ್ತು ನಿರ್ವಾಹಕರ ಪೈಕಿ ಶೇ. ೮೦ರಷ್ಟು ಈಶಾನ್ಯ ಕರ್ನಾಟಕ, ವಾಯುವ್ಯ ಕರ್ನಾಟಕ ಮತ್ತು ಇತರ ಪ್ರದೇಶಗಳಿಗೆ ಸೇರಿದವರು. ಮಂಗಳೂರು ಮತ್ತು ಪುತ್ತೂರು ವಿಭಾಗ ವ್ಯಾಪ್ತಿಗೆ ಸೇರಿದ ಸ್ಥಳೀಯ ಚಾಲಕ ಮತ್ತು ನಿರ್ವಾಹಕರ ಸಂಖ್ಯೆ ಶೇ. 20 ಇದೆ. ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಮೂಲಕ ನೇಮಕಾತಿ ಪದ್ಧತಿ ಜಾರಿಗೆ ಬಂದ ಬಳಿಕ ಉತ್ತರ ಕರ್ನಾಟಕದವರೇ ಶೇ. 80ರಷ್ಟು ಇಲ್ಲಿಗೆ ನೇಮಕಗೊಳ್ಳುತ್ತಿದ್ದು, ಸ್ಥಳೀಯರ ನೇಮಕಾತಿ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಕಾರ್ಮಿಕರ ಒತ್ತಾಯ..
ಕೆಎಸ್‌ಆರ್‌ಟಿಸಿಯ ಚಾಲಕ ಮತ್ತು ನಿರ್ವಾಹಕ ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟಂತೆ ಕೇಂದ್ರ ಕಚೇರಿ ಮಟ್ಟದಲ್ಲಿ ನೇಮಕಾತಿಯನ್ನು ನಡೆಸುವ ಬದಲು ಆಯಾ ವಿಭಾಗಗಳ ಮಟ್ಟದಲ್ಲಿಯೇ ಒಂದೇ ದಿನ ನೇಮಕಾತಿ ಸಂದರ್ಶನವನ್ನು ನಡೆಸಿದರೆ, ಆಯಾ ವಿಭಾಗ ಮಟ್ಟದವರೇ ಆಯ್ಕೆಯಾಗುವ ಮೂಲಕ ಸ್ಥಳೀಯ ವಿಭಾಗದಲ್ಲಿ ಸ್ಥಳೀಯರಿಗೆ ನೇಮಕಾತಿ ಸಿಗಲು ಸಾಧ್ಯವಾಗುತ್ತದೆ. ಹಿಂದೆ ವಿಭಾಗಮಟ್ಟದಲ್ಲಿ ಚಾಲಕ-ನಿರ್ವಾಹಕ-ವರ್ಕ್‌ಶಾಪ್ ಸಿಬಂದಿಗಳ ನೇಮಕ ನಡೆಯುವ ಪದ್ಧತಿ ಕೆಎಸ್‌ಆರ್‌ಟಿಸಿಯಲ್ಲಿ ಇತ್ತು. ಇದೇ ಪದ್ಧತಿಯನ್ನು ಜಾರಿಗೆ ತರುವಂತೆ ಕೆಎಸ್‌ಆರ್‌ಟಿಸಿ ನೌಕರರು ೨೦೦೪ರಿಂದ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಪದ್ಧತಿಯನ್ನು ಜಾರಿಗೆ ತಾರದೆ ಸರಕಾರ ಇದೀಗ ಅಂತರ್‌ನಿಗಮ ವರ್ಗಾವಣೆಯನ್ನು ಜಾರಿಗೆ ತರಲು ಮುಂದಾಗಿದೆ.

ಹೋಗುವವರ ಸಂಖ್ಯೆ ಹೆಚ್ಚು…
ಅಂತರ್‌ನಿಗಮ ವರ್ಗಾವಣೆ ಪದ್ಧತಿ ಜಾರಿಗೆ ಬಂದರೆ ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಗಳಿಂದ ತಮ್ಮ ಸ್ವಂತ ಊರುಗಳಿಗೆ ಸಂಬಂಧಿಸಿದ ವಿಭಾಗಗಳಿಗೆ ತೆರಳುವ ಸಿಬ್ಬಂದಿಗಳ ಸಂಖ್ಯೆ ಹೆಚ್ಚು. ಬೇರೆ ನಿಗಮ ಅಥವಾ ವಿಭಾಗಗಳಲ್ಲಿ ದ.ಕ.,  ಉಡುಪಿ ಮತ್ತು ಮಡಿಕೇರಿ ಜಿಲ್ಲೆಗಳ ಸಿಬ್ಬಂದಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಬೆಂಗಳೂರಿನ ಬಿಎಂಟಿಸಿಯಲ್ಲಿ  ದ.ಕ. ಮತ್ತು ಉಡುಪಿ ಮೂಲದವರು ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮಂಗಳೂರು, ಪುತ್ತೂರು ವಿಭಾಗಕ್ಕೆ ವರ್ಗಾವಣೆ ಗೊಳಿಸಿದರೆ  ಸಿಬ್ಬಂದಿ ಕೊರತೆ ನಿವಾರಣೆಯಾಗದು.

ಸಂಖ್ಯೆಯ ಅಸಮತೋಲನ..
ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ತಮ್ಮ ತಮ್ಮ ಊರುಗಳಿಗೆ ವರ್ಗಾವಣೆ ಪಡೆದುಕೊಂಡ ಉತ್ತರ ಕರ್ನಾಟಕದವರನ್ನು ಇಲ್ಲಿಂದ ಅವರ ಮೂಲವಿಭಾಗಕ್ಕೆ ತೆರಳುವ ವರ್ಗಾವಣೆ ಆದೇಶ ಜಾರಿಗೊಳಿಸುವ ಮೊದಲು ಇಲ್ಲಿಂದ ವರ್ಗಾವಣೆಯಾದವರ ಸಂಖ್ಯೆಗೆ ಪರ್ಯಾಯವಾಗಿ ನೇಮಕಗೊಂಡವರು ಕರ್ತವ್ಯಕ್ಕೆ ಹಾಜರಾಗಬೇಕು.

ಅಲ್ಲದೇ ಈ ಸಂಖ್ಯೆಯನ್ನು ಆಧರಿಸಿ ಇಲ್ಲಿನ ವ್ಯವಸ್ಥೆಗೆ ತೊಂದರೆಯಾಗದಂತೆ ವರ್ಗಾವಣಾ ಆದೇಶವನ್ನು ಅನುಷ್ಠಾನಗೊಳಿಸಬೇಕು ಎಂಬ ಅಭಿಪ್ರಾಯಗಳು ತಜ್ಞರಿಂದ  ಕೇಳಿಬಂದಿವೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss