ಟ್ವಿಟ್ಟರ್, ಫೇಸ್ಬುಕ್ ನಿಮ್ಮ ದೂರನ್ನು ನಿರ್ಲಕ್ಷಿಸಿದರೆ ಏನು ಮಾಡ್ಬೇಕು? ಸರ್ಕಾರ ತೆರೆದಿಟ್ಟಿದೆ ಈ ಹೊಸ ದಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸಾಮಾಜಿಕ ಮಾಧ್ಯಮ ಬಳಕೆದಾರರ ಸಮಸ್ಯೆಗಳು ಹಾಗೂ ಇತರೇ ಕುಂದು ಕೊರತೆಗಳ ಕುರಿತಾಗಿ ಜನರು ತಮ್ಮ ದೂರು ಸಲ್ಲಿಸಲು ಮೇಲ್ಮನವಿ ಸಮಿತಿಯೊಂದನ್ನು ರಚಿಸಲು ಸರ್ಕಾರ ಮುಂದಾಗಿದ್ದು ಮುಂದಿನ ಮೂರು ತಿಂಗಳೊಳಗೆ ಸಮಿತಿ ರಚಿಸುವುದಾಗಿ ಹೇಳಿದೆ. ಈಕುರಿತು ಅಧಿಸೂಚನೆಯನ್ನೂ ಹೊರಡಿಸಲಾಗಿದ್ದು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಜನರು ತಮ್ಮ ದೂರುಗಳನ್ನು ಈ ಸಮಿತಿಗೆ ಸಲ್ಲಿಸಬಹುದಾಗಿದೆ.

ಸಾಮಾಜಿಕ ಮಾಧ್ಯಮ ಸಂಸ್ಥೆಯಿಂದ ನೇಮಕಗೊಂಡ ಮಧ್ಯವರ್ತಿ ಅಥವಾ ದೂರುಗಳ ಅಧಿಕಾರಿಯ ನಿರ್ಧಾರದಿಂದ ತೃಪ್ತರಾಗದ ಯಾವುದೇ ವ್ಯಕ್ತಿ ಡಿಜಿಟಲ್ ಮಾರ್ಗದಲ್ಲಿಯೇ ಮೇಲ್ಮನವಿ ಸಮಿತಿಗಳನ್ನು ಸಂಪರ್ಕಿಸಬಹುದಾಗಿದ್ದು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.

30 ದಿನಗಳೊಳಗೆ ಪರಿಹಾರ 

“ಯಾವುದೇ ಮೇಲ್ಮನವಿಯನ್ನು 30 ದಿನಗಳಲ್ಲಿ ಇತ್ಯರ್ಥಗೊಳಿಸಲಾಗುವುದು. ಕುಂದುಕೊರತೆ ಮೇಲ್ಮನವಿ ಸಮಿತಿಯು ಅಂಗೀಕರಿಸಿದ ಪ್ರತಿಯೊಂದು ಆದೇಶವನ್ನು ಸಂಬಂಧಪಟ್ಟ ಮಧ್ಯವರ್ತಿಯು ಅನುಸರಿಸಬೇಕು ಮತ್ತು ಅದರ ವರದಿಯನ್ನು ಅದರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು” ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಹಿಂದೆ ಸಾಮಾಜಿಕ ಮಾಧ್ಯಮಗಳು ಈ ಉದ್ದೇಶಕ್ಕಾಗಿ ಸ್ವಯಂ ನಿಯಂತ್ರಿತ ಸಂಸ್ಥೆ ಸ್ಥಾಪಿಸಬೇಕು ಎಂದು ವಾದಿಸಿದ್ದವು, ಆದರೆ ಅದೀಗ ವ್ಯರ್ಥವಾಗಿದೆ.

ಸಮಿತಿಯಲ್ಲಿ ಯಾರು ಇರುತ್ತಾರೆ ? 

ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ ಮೇಲ್ಮನವಿ ಸಮಿತಿಯು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಮತ್ತು ಇಬ್ಬರು ಪೂರ್ಣ ಸಮಯದ ಸದಸ್ಯರನ್ನು ಒಳಗೊಂಡಿರುತ್ತದೆ. ಅದರಲ್ಲಿ ಒಬ್ಬರು ಸದಸ್ಯ ಪದನಿಮಿತ್ತ ಮತ್ತು ಇಬ್ಬರು ಸ್ವತಂತ್ರ ಸದಸ್ಯರಾಗಿರುತ್ತಾರೆ. ಕಂಪೆನಿಯ ಕುಂದುಕೊರತೆ ಅಧಿಕಾರಿಯ ನಿರ್ಧಾರದಿಂದ ಬಾಧಿತರಾದ ಯಾವುದೇ ವ್ಯಕ್ತಿ ಕುಂದುಕೊರತೆ ಅಧಿಕಾರಿಯಿಂದ ಸಂವಹನವನ್ನು ಸ್ವೀಕರಿಸಿದ ದಿನಾಂಕದಿಂದ 30ರ ಅವಧಿಯೊಳಗೆ ಕುಂದುಕೊರತೆ ಮೇಲ್ಮನವಿ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

 ಆನ್‌ ಲೈನ್‌ ವಿಧಾನದಲ್ಲಿಯೇ ಕಾರ್ಯಾಚರಣೆ

ಕುಂದುಕೊರತೆ ಮೇಲ್ಮನವಿ ಸಮಿತಿಯು ಅಂತಹ ಮನವಿಯನ್ನು ತ್ವರಿತವಾಗಿ ವ್ಯವಹರಿಸುತ್ತದೆ ಮತ್ತು ಮೇಲ್ಮನವಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಅಂತಿಮವಾಗಿ ಮನವಿಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ ಎನ್ನಲಾಗಿದೆ. ವಿವಾದ-ಪರಿಹಾರ ಕಾರ್ಯವಿಧಾನವು ಸಂಪೂರ್ಣವಾಗಿ ಆನ್‌ಲೈನ್ ಆಗಿರುತ್ತದೆ. ಮೇಲ್ಮನವಿ ಸಲ್ಲಿಸುವುದರಿಂದ ಹಿಡಿದು ಅದರ ನಿರ್ಧಾರದವರೆಗೆ ಎಲ್ಲವೂ ಡಿಜಿಟಲ್ ಮೋಡ್‌ನಲ್ಲಿಯೇ ಕಾರ್ಯ ನಿರ್ವಹಿಸಲಿದೆ.

ಕುಂದುಕೊರತೆ ಮೇಲ್ಮನವಿ ಸಮಿತಿಯು ಅಗತ್ಯವೆಂದು ಭಾವಿಸಿದರೆ ಮೇಲ್ಮನವಿಯನ್ನು ವ್ಯವಹರಿಸುವಾಗ, ಅಗತ್ಯವಿರುವ ಅರ್ಹತೆ, ಅನುಭವ ಮತ್ತು ವಿಷಯದ ಪರಿಣತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯಿಂದ ಸಹಾಯವನ್ನು ಪಡೆಯಬಹುದಾಗಿದೆ.

ಹೊಸ ನಿಯಮಗಳನ್ನು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಗಳು, 2022 ಎಂದು ಕರೆಯಲಾಗಿದ್ದು ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!