ಸರ್ಕಾರಿ ಜಾಗದಲ್ಲಿ ಕಾಫಿ ಬೆಳೆದವರಿಗೆ ನಿರಾಳತೆ ತರಲಿದೆ ಸರ್ಕಾರದ ಹೊಸ ಆದೇಶ

ಹೊಸದಿಗಂತ ವರದಿ ಮಡಿಕೇರಿ
ಸರಕಾರಿ ಜಾಗ ಅತಿಕ್ರಮಿಸಿಕೊಂಡು ಹಲವು ವರ್ಷಗಳಿಂದ ಕಾಫಿ ಕೃಷಿ ಮಾಡಿಕೊಂಡಿರುವ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲು ಸರಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ತಿಳಿಸಿದ್ದಾರೆ.
ಪೊನ್ನಂಪೇಟೆಯ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಪೈಸಾರಿ ಜಾಗ ಅತಿಕ್ರಮಣ ಮಾಡಿಕೊಂಡು ಕಾಫಿ ಕೃಷಿ ಮಾಡಿರುವ ಬೆಳೆಗಾರರ 10 ಎಕರೆಯೊಳಗಿನ ಜಮೀನನ್ನು 30 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಅತಿಕ್ರಮಿತ ಜಾಗವನ್ನು ಸಕ್ರಮಗೊಳಿಸಲು ಬೆಳೆಗಾರರು ಈಗಾಗಲೇ ಫಾರಂ 53, 50, 57ರಲ್ಲಿ ಅರ್ಜಿ ಸಲ್ಲಿಸಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದ ಸಮಸ್ಯೆ ಬಗೆಹರಿದಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಂತಹ ಕಾಫಿ ತೋಟಗಳನ್ನು ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಎರಡೂವರೆ ಎಕರೆಗೆ ಮೂರು ಸಾವಿರ ರೂಪಾಯಿ ವಾರ್ಷಿಕ ತೆರಿಗೆಯನ್ನು ಬೆಳೆಗಾರರು ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದರು.
ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಮತ್ತು ಕಂದಾಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಈ ಸಂಬಂಧವಾಗಿ ಮೇ 12ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್’ನಲ್ಲಿ ಬೆಳೆಗಾರರ‌ ಸಮಾವೇಶ ನಡೆಸಲಾಗುತ್ತದೆ. ಈ ಸಮಾವೇಶದಲ್ಲಿ ಬೆಳೆಗಾರರ ಸಮಸ್ಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಬೆಳೆಗಾರರು ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ನುಡಿದರು.
ಕಾಫಿ ಬೆಳೆಗಾರರ ಬೇಡಿಕೆಗಳಿಗೆ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಈಗಾಗಲೇ ಬೆಳೆಗಾರರ ಬೇಡಿಕೆಯಂತೆ 10 ಹೆಚ್.ಪಿ.ವರೆಗಿನ ಪಂಪ್’ಸೆಟ್’ಗಳಿಗೆ ಉಚಿತ ವಿದ್ಯುತ್ ನೀಡಿರುವುದು ಬೆಳೆಗಾರರಲ್ಲಿ ಹೊಸ ಚೈತನ್ಯ ತುಂಬಿದೆ ಎಂದು ತಿಳಿಸಿದರು.
ಅದೇ ರೀತಿ ಅತಿಕ್ರಮಿತ ಪೈಸಾರಿ ಜಾಗದಲ್ಲಿ ಕಾಫಿ ತೋಟಗಳನ್ನು ಬೆಳೆದ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಕ್ರಮವು ಬೆಳೆಗಾರರಿಗೆ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಬೋಪಯ್ಯ ಹೇಳಿದರು.
ಗೋಷ್ಠಿಯಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ ಗಣಪತಿ, ಸದಸ್ಯ
ತೀತಿಮಾಡ ಲಾಲಾ ಭೀಮಯ್ಯ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೋಡುಮಾಡ ಶರಿನ್ ಸುಬ್ಬಯ್ಯ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!