spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡಾಗ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ : ಸಚಿವ ಎಸ್.ಅಂಗಾರ

- Advertisement -Nitte

ಹೊಸ ದಿಗಂತ ವರದಿ, ಮಡಿಕೇರಿ:

ಆರ್ಥಿಕವಾಗಿ ಹಿಂದುಳಿದ ಜನಾಂಗಗಳ ಅಭ್ಯುದಯಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಕಾರ್ಯನಿರ್ವಹಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು-ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ನ ಮಡಿಕೇರಿ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಂಘದ ಆಡಳಿತ ಮಂಡಳಿಯ ಸರ್ವರೂ ಜನರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣಬೇಕು. ಹಾಗೆ ಆದಾಗ ಮಾತ್ರ ಸಂಘ ಜನ ಮತ್ತು ಹಣವನ್ನು ಗಳಿಸಲು ಸಾಧ್ಯ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಹಕಾರಿ ಕ್ಷೇತ್ರ ಉತ್ತಮ ತತ್ವ ಮತ್ತು ವಿಚಾರವನ್ನಿಟ್ಟುಕೊಂಡು ಪರಸ್ಪರ ಸಹಕಾರದ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ಕ್ಷೇತ್ರದಿಂದ ಇಂದು ಹಲವು ಸಮುದಾಯದ ಜನ ಆರ್ಥಿಕವಾಗಿ ಬೆಳವಣಿಗೆಯನ್ನು ಕಂಡಿದ್ದಾರೆ. ಸಹಕಾರಿ ಸಂಘಗಳು ಮನುಷ್ಯನ ಒಂದು ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಜಾತಿ, ಜನಾಂಗಗಳು ಆರ್ಥಿಕ ಅಭಿವೃದ್ಧಿಗೆ, ಸ್ವಾವಲಂಬನೆಯ ಬದುಕಿಗಾಗಿ ಸಹಕಾರ ಸಂಘವನ್ನು ನೆಚ್ಚಿಕೊಂಡಿವೆ ಎಂದು ತಿಳಿಸಿದರು.
ಇಂದು ಸರಕಾರ ಮಾಡದ್ದನ್ನು ಸಹಕಾರಿ ಸಂಘಗಳು ಮಾಡುತ್ತಿವೆ ಎಂದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಿಂತ ಸಹಕಾರಿ ಬ್ಯಾಂಕ್‌ಗಳು ಹೆಚ್ಚು ಸೌಲಭ್ಯಗಳನ್ನು ಹೊಂದಿದ್ದು, ಸದಸ್ಯರ ಬೇಡಿಕೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಣೆಯಾಗುತ್ತಿರುವುದು ಶ್ಲಾಘನೀಯವೆಂದರು. ನಂಬಿಕೆಯ ಆಧಾರದಲ್ಲಿ ಸಹಕಾರಿ ಕ್ಷೇತ್ರ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಮಾತನಾಡಿ, ಕಷ್ಟದ ದಿನಗಳಲ್ಲಿ ಹಿರಿಯರು ಸತತ ಪರಿಶ್ರಮದಿಂದ ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಆ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಗೌಡ ಸಮಾಜ ಬಾಂಧವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮುದಾಯದ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಗಳಂತಹ ಸ್ಪರ್ಧಾತ್ಮಕ ತರಬೇತಿಗಳನ್ನು ನೀಡಿದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಕೊಡಗು- ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹೆಚ್ಚು ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ಮತ್ತಷ್ಟು ಬೆಳವಣಿಗೆ ಕಾಣುವಂತಾಗಲೆಂದು ಹಾರೈಸಿದರು.
ಸಂಘದ ನಿರ್ದೇಶಕ ನಿಂಗರಾಜು ನಂಗಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷ ಹರೀಶ್ ದೇವಂಗೋಡಿ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೆಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಕೊಡಗು ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಮಡಿಕೇರಿ ಗೌಡ ವಿದ್ಯಾಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ, ಕೊಡಗು ಜಿಲ್ಲಾ ಒಕ್ಕಲಿಗರ ಸಮಾಜದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss