Wednesday, August 10, 2022

Latest Posts

ಹಾರಂಗಿ ನದಿ ಪಾತ್ರದಲ್ಲಿ ಪುನಶ್ಚೇತನ- ರಕ್ಷಣಾ ಕಾಮಗಾರಿಗೆ ಅಗತ್ಯ ಕ್ರಮ ವಹಿಸಿ: ಸಚಿವ ಸೋಮಣ್ಣ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮಡಿಕೇರಿ:

ಹಾರಂಗಿ ಜಲಾನಯನ ಪ್ರದೇಶ, ನದಿ ಪಾತ್ರದಲ್ಲಿ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಗೆ ಸರ್ಕಾರದಿಂದ 130 ಕೋಟಿ ರೂ. ಅಂದಾಜು ಮೊತ್ತಕ್ಕೆ ತಾಂತ್ರಿಕ ಮಂಜೂರಾತಿ ನೀಡಿದ್ದು, ಆ ದಿಸೆಯಲ್ಲಿ ಇದರ ಸದ್ಬಳಕೆ ಆಗಬೇಕು. ಜೊತೆಗೆ ಉದ್ಯಾನವನ ಇನ್ನಷ್ಟು ವಿಸ್ತರಿಸಿ ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಒದಗಿಸುವ ಕುರಿತು ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಹಂತದಲ್ಲಿ ಆಗಬೇಕಿರುವ ಕೆಲಸಗಳಿಗೆ ಸಂಬಂಧಿಸಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಅನುಷ್ಠಾನಗೊಳಿಸಲಾಗುವುದು. ಆ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.
ಕೊಡಗು ಜಿಲ್ಲೆಯಲ್ಲಿ ಕುಶಾಲನಗರವು ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಆದ್ದರಿಂದ ಕುಶಾಲನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ವಿ.ಸೋಮಣ್ಣ ಹೇಳಿದರು.
ಪ್ರವಾಹ ಸಂಭವಿಸುವ ಬಡಾವಣೆಗಳನ್ನು ಸಂರಕ್ಷಣೆ ಮಾಡಬೇಕಿದೆ. ಹಾಗೆಯೇ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಸಚಿವರು ಸಲಹೆ ಮಾಡಿದರು.
ತಡೆಗೋಡೆ ನಿರ್ಮಿಸಿ: ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕುಶಾಲನಗರದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹದಿಂದಾಗಿ ಯಾವುದೇ ಬಡಾವಣೆಗಳು ತಲೆ ಎತ್ತಿಲ್ಲ. ಕುಶಾಲನಗರದ ಜನರು ನೆಮ್ಮದಿಯಾಗಿ ಇರುವಂತೆ ಕಾರ್ಯ ಯೋಜನೆ ರೂಪಿಸಬೇಕಿದೆ. ಕುವೆಂಪು ಹಾಗೂ ಸಾಯಿ ಬಡಾವಣೆಗೆ ನೀರು ಬರದಂತೆ ತಡೆಗೋಡೆ ನಿರ್ಮಿಸಬೇಕಿದೆ ಎಂದು ಸಲಹೆ ಮಾಡಿದರು.
ರಸ್ತೆಗೆ ಹೆಚ್ಚು ಹಣ ನೀಡಿ: ಹಾರಂಗಿ ಜಲಾಶಯದಿಂದ ಪಿರಿಯಾಪಟ್ಟಣ, ಹುಣಸೂರು, ಅರಕಲಗೂಡು, ಕೆ.ಆರ್.ನಗರ ವ್ಯಾಪ್ತಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿನ ಜನತೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದೂ ಅವರು ಒತ್ತಾಯಿಸಿದರು.
ಹಿಂದಿನ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಜಲಾಶಯ ಪಾತ್ರದಲ್ಲಿ ಹೂಳು ತೆಗೆಯಲು 75 ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಯಾವುದೇ ಟೆಂಡರ್ ಅನುಮೋದನೆಯಾಗದೆ ಈಗ 130 ಕೋಟಿ ರೂ.ನಷ್ಟು ಅಂದಾಜು ಮಾಡಲಾಗಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು.
ಹಾರಂಗಿ ಜಲಾಶಯದ ಜೊತೆಗೆ ಕಾವೇರಿ ನದಿ ಪಾತ್ರದಲ್ಲೂ ಸಹ ಹೂಳು ತೆಗೆಯಬೇಕಿದೆ. ಇದರಿಂದ ಕೊಡಗು ಜಿಲ್ಲೆಯ ಜನರಿಗೆ ಒಳಿತಾಗಲಿದೆ ಎಂದರು.
ಹಾರಂಗಿ ಜಲಾಶಯದಲ್ಲಿ ನೀರು ಹೆಚ್ಚಾದಾಗ ಕಾವೇರಿ ನದಿ ಪಾತ್ರದಲ್ಲಿಯೂ ನೀರು ಹೆಚ್ಚಳದಿಂದ ಕುಶಾಲನಗರಕ್ಕೆ ತುಂಬಾ ತೊಂದರೆಯಾಗಲಿದೆ. ಕುಶಾಲನಗರದ ಸಾಯಿ ಮತ್ತು ಕುವೆಂಪು ಬಡಾವಣೆಯಲ್ಲಿ ಪ್ರವಾಹ ಉಂಟಾಗಿ ಸಂಕಷ್ಟ ಎದುರಿಸುವಂತಾಗುತ್ತದೆ. ಆದ್ದರಿಂದ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅಪ್ಪಚ್ಚು ರಂಜನ್ ಮನವಿ ಮಾಡಿದರು.
ಅರಕಲಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರು ಮಾತನಾಡಿ, ಹಾರಂಗಿ ಜಲಾಶಯವು ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಆದ್ದರಿಂದ ಹೂಳು ತೆಗೆಯುವ ಸಂದರ್ಭದಲ್ಲಿ ಬೆಟ್ಟಗುಡ್ಡಗಳನ್ನು ಗಮನಹರಿಸಬೇಕು ಎಂದು ಸಲಹೆ ಮಾಡಿದರು. ನಂಜುಂಡಪ್ಪ ವರದಿ ಅನುಷ್ಠಾನವಾಗಬೇಕು. ಕಾಡಾ ವ್ಯಾಪ್ತಿಯನ್ನು ಬಲ ಪಡಿಸಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮಳೆ ಪ್ರಮಾಣ ನೋಡಿಕೊಂಡು ಹಾರಂಗಿ ಜಲಾಶಯದಿಂದ ನದಿಗೆ ನೀರನ್ನು ಬಿಡುವಂತಾಗಬೇಕು. ಇದರಿಂದ ಕುಶಾಲನಗರದ ಸಾಯಿ ಮತ್ತು ಕುವೆಂಪು ಬಡಾವಣೆ ರಕ್ಷಣೆ ಸಾಧ್ಯ ಎಂದರು.
ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸಿದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಆ ನಿಟ್ಟಿನಲ್ಲಿ ಎಂಜಿನಿಯರ್‌ಗಳು ಕಾಳಜಿ ವಹಿಸಬೇಕಿದೆ ಎಂದು ಪ್ರತಾಪ್ ಸಿಂಹ ನುಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ತಡೆಯುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆ ವರದಿ ನೀಡಿದ್ದು, ಆ ಬಗ್ಗೆ ಕ್ರಮವಹಿಸಬೇಕಿದೆ. ಹಾಗೆಯೇ ಇಲಾಖೆಗಳ ನಡುವೆ ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕಿದೆ ಎಂದು ಸಲಹೆ ಮಾಡಿದರು.
ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ನೀರಾವರಿ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಶಂಕರೇಗೌಡ ಅವರು, ಹಾರಂಗಿ ಅಚ್ಚುಕಟ್ಟು ಪ್ರದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಹಿಸಬೇಕಿರುವ ಕಾರ್ಯಯೋಜನೆ ಬಗ್ಗೆ ಹಲವು ಮಾಹಿತಿ ನೀಡಿದರು.
ಹಾರಂಗಿ ಜಲಾಶಯ ನೀರು ಬಳಕೆದಾರರ ಸಂಘದ ಅಧ್ಯಕ್ಷ ಚೌಡೇಗೌಡ ಅವರು ಮಾಹಿತಿ ನೀಡಿ ನೀರು ಬಳಕೆದಾರರ ಸಂಘದಿಂದ ಹಾರಂಗಿ ಜಲಾಶಯ ಅಭಿವೃದ್ಧಿ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಹೇಳಿದರು.
ಕುಶಾಲನಗರದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ , ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಮೈಸೂರು ಜಿ.ಪಂ.ಸಿಇಒ ಎಂ.ಎನ್.ಯೋಗೀಶ್, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಚೌಡೇಗೌಡ, ನೀರಾವರಿ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಶಂಕರೇಗೌಡ, ಅಧೀಕ್ಷಕ ಎಂಜಿನಿಯರ್ ಚೆನ್ನಕೇಶವ, ಇಇ ಮಂಜು, ಎಇಇ ಮಹೇಂದ್ರ ಕುಮಾರ್, ಎಇ ಸಿದ್ದರಾಜು ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss