ಉಂಡ ಮನೆಗೆ ಕನ್ನ ಹಾಕಿದ ಇಬ್ಬರ ಬಂಧನ

ಹೊಸ ದಿಗಂತ ವರದಿ, ಮಡಿಕೇರಿ:

ಕೆಲಸ ನೀಡಿದ ಸಂಸ್ಥೆಯ ಕಛೇರಿಯ ಬೀಗವನ್ನೇ ಮುರಿದು ನಗದು ದೋಚಿದ ಇಬ್ಬರು ಆರೋಪಿಗಳನ್ನು ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಬೇಟೋಳಿಯ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್(20) ಹಾಗೂ ಸೆಬಾಸ್ಟಿನ್ ಡಿಸೋಜಾ(20) ಬಂಧಿತ ಆರೋಪಿಗಳು.
ವೀರಾಜಪೇಟೆ ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ಸಂಸ್ಥೆಯಲ್ಲಿ ಡೆಲಿವರಿ ಬಾಯ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಜೂ.12 ರಂದು ರಾತ್ರಿ ಕಛೇರಿಯ ಬೀಗ ಮುರಿದು ನಗದು ಪೆಟ್ಟಿಗೆಯಲ್ಲಿದ್ದ 1.02 ಲಕ್ಷ ರೂ.ಗಳನ್ನು ದೋಚಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳಿಬ್ಬರು ವೆಬ್ ಸೀರಿಸ್’ನಲ್ಲಿ ಬರುತ್ತಿದ್ದ ಚಲನಚಿತ್ರದ ಕಳವು ಪ್ರಕರಣಗಳಂತೆಯೇ ಸಂಸ್ಥೆಯಿಂದ ಹಣ ದೋಚಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ಗುರುತು ಪತ್ತೆಯಾಗದಂತೆ ರೈನ್ ಕೋಟ್ ಮತ್ತು ಗ್ಲೌಸ್ ಧರಿಸಿ, ಮುಖ ಮುಚ್ಚಿಕೊಂಡು, ಕಛೇರಿಯ ಬೀಗ ಒಡೆದು, ಸಿಸಿ ಟಿವಿಗೆ ಸ್ಪ್ರೇ ಮಾಡಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ತನಿಖೆ ಕೈಗೊಂಡ ಪೊಲೀಸರು ಜೂ.23 ರಂದು ರಾತ್ರಿ ಅಮ್ಮತ್ತಿ ಕಾವಾಡಿ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿದರು. ಕಳವು ಮಾಡಿದ್ದ ಹಣದಲ್ಲಿ 82 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದು, ಉಳಿದ ಮೊತ್ತವನ್ನು ಆರೋಪಿಗಳು ಬಳಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಹಾಗೂ ವೀರಾಜಪೇಟೆ ಡಿವೈಎಸ್‌ಪಿ ನಿರಂಜನ್ ರಾಜ್ ಅರಸ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಅವರ ನಿರ್ದೇಶನದಂತೆ ವೀರಾಜಪೇಟೆ ನಗರ ಎಸ್‌ಐ ಸಿ.ವಿ.ಶ್ರೀಧರ, ಎಎಸ್‌ಐ ಎಂ.ಎಂ.ಮೊಹಮ್ಮದ್, ಸಿಬ್ಬಂದಿಗಳಾದ ಸುಬ್ರಮಣಿ, ಗಿರೀಶ್, ರಜನ್ ಕುಮಾರ್, ಧರ್ಮ, ಗೀತಾ, ಮಧು, ಕಿರಣ್, ಮಹಂತೇಶ್ ಪೂಜಾರಿ, ಸಂತೋಷ್ ಹಾಗೂ ಚಾಲಕ ರಮೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!