‘ದಿ ಕಾಶ್ಮೀರ ಫೈಲ್ಸ್‌’ಗೆ ದಾರಿ ಮಾಡಿಕೊಟ್ಟ ಗುಜರಾತಿ ‘ಪ್ರೇಮ್ ಪ್ರಕರನ್’

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಭಾರತೀಯ ಚಿತ್ರರಂಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ಭಾರೀ ಹವಾ ಎಬ್ಬಿಸಿದೆ. ಕೆಲವರು ಸಿನೆಮಾ ಬಿಡುಗಡೆಗೆ ತಡೆಯೊಡ್ಡುವ ಪ್ರಯತ್ನ ನಡೆಸಿದರೆ, ಬಿಡುಗಡೆಯಾದ ನಂತರ ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಮಟ್ಟ ಹೇಗಿದೆ ಎಂದರೆ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನೆಮಾ ಹಿಂತೆಗೆದು ದಿ ಕಾಶ್ಮೀರ್ ಫೈಲ್ಸ್‌ಗೆ ಅವಕಾಶ ಮಾಡಿ ಕೊಡಲಾಗುತ್ತಿದೆ.

ಹೌದು, ಕಳೆದ ವಾರ ಬಿಡುಗಡೆಯಾದ ಗುಜರಾತಿ ಚಲನಚಿತ್ರ ’ಪ್ರೇಮ್ ಪ್ರಕರನ್’ ನಿರ್ಮಾಪಕರು ಮಾ. 15ರಂದು ಥಿಯೇಟರ್‌ಗಳಿಂದ ತಮ್ಮ ಸಿನೆಮಾವನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ ದಿ ಕಾಶ್ಮೀರ್ ಫೈಲ್ಸ್ ಹೆಚ್ಚಿನ ಪ್ರದರ್ಶನಗಳನ್ನು ಪಡೆಯುತ್ತಿದೆ. ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರ ಈ ಚಲನಚಿತ್ರವು ಕಾಶ್ಮೀರಿ ಕಣಿವೆಯಿಂದ ಹಿಂದುಗಳ ಬಲವಂತದ ವಲಸೆಯ ಸುತ್ತ ನೈಜ ಘಟನೆಗಳನ್ನು ಆಧರಿಸಿದೆ.

ಗುಜರಾತಿ ಚಿತ್ರ ಪ್ರೇಮ್ ಪ್ರಕರನ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ನಿರ್ಮಾಪಕರು ದಿ ಕಾಶ್ಮೀರ್ ಫೈಲ್ಸ್ ಹೆಚ್ಚಿನ ಪ್ರದರ್ಶನಗಳನ್ನು ಪಡೆಯಬೇಕೆಂದು ಬಯಸಿದರು. ಆದ್ದರಿಂದ ನಾವು ಸ್ವಲ್ಪ ಸಮಯದ ನಂತರ ’ಪ್ರೇಮ್ ಪ್ರಕರನ್’ ಚಿತ್ರದೊಂದಿಗೆ ಥಿಯೇಟರ್‌ಗಳಿಗೆ ಹಿಂತಿರುಗುತ್ತೇವೆ ಎಂದು ಗುಜರಾತಿ ಚಿತ್ರದ ವಿತರಕ ವಂದನ್ ಷಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಿತ್ರದ ನಿರ್ಮಾಪಕ-ನಿರ್ದೇಶಕ ಚಂದ್ರೇಶ್ ಭಟ್ ಈ ಕುರಿತು ಟ್ವೀಟ್ ಮಾಡಿ, ‘ರಾಷ್ಟ್ರವೇ ಮೊದಲು. ಕಾಶ್ಮೀರ ಫೈಲ್ಸ್‌ಗೆ ದಾರಿ ಮಾಡಿಕೊಡುತ್ತಿದ್ದೇವೆ. ಇದರಿಂದ ನೀವು ಒಂದೇ ಸಿನಿಮಾದಲ್ಲಿ ಮ್ಯಾಜಿಕ್ ಅನ್ನು ಆನಂದಿಸಬಹುದು. ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಥಿಯೇಟರ್‌ನಲ್ಲಿ ನೋಡುತ್ತೇವೆ. ಅಪಾರ ಪ್ರಮಾಣದ ಪ್ರೀತಿಗಾಗಿ ನಮ್ಮ ಪ್ರೇಕ್ಷಕರಿಗೆ ತುಂಬಾ ಧನ್ಯವಾದಗಳು. ಶೀಘ್ರದಲ್ಲೇ ನಾವು ನಿಮಗಾಗಿ ಚಿತ್ರಮಂದಿರಗಳಿಗೆ ಹಿಂತಿರುಗುತ್ತೇವೆ. ವಂದೇ ಮಾತರಂ’ ಎಂದು ಹೇಳಿದ್ದಾರೆ.

ಕಾಶ್ಮೀರ ಫೈಲ್ಸ್ ಕೇವಲ ಚಲನಚಿತ್ರಕ್ಕಿಂತ ದೊಡ್ಡದು
ಚಲನಚಿತ್ರ ನಿರ್ಮಾಪಕನಾಗಿ ಮತ್ತು ಭಾರತೀಯನಾಗಿ, ಕಾಶ್ಮೀರ ಫೈಲ್ಸ್ ಕೇವಲ ಚಲನಚಿತ್ರಕ್ಕಿಂತ ದೊಡ್ಡದಾಗಿದೆ. ನನ್ನ ಚಿತ್ರವು ಗುಜರಾತಿ ಚಲನಚಿತ್ರವಾಗಿದ್ದರೂ, ನಮ್ಮ ಚಿತ್ರವನ್ನು ಥಿಯೇಟರ್‌ಗಳಿಂದ ಹಿಂತೆಗೆದುಕೊಳ್ಳುವ ಈ ನಿರ್ಧಾರವು, ದಿ ಕಾಶ್ಮೀರ್ ಫೈಲ್ಸ್‌ಗೆ ಹೆಚ್ಚಿನ ಪ್ರದರ್ಶನಗಳನ್ನು ಪಡೆಯಲು ಕೊಡುಗೆ ನೀಡುವ ಮತ್ತು ದಾರಿ ಮಾಡಿಕೊಡುವ ನಮ್ಮ ಮಾರ್ಗವಾಗಿದೆ. ನನ್ನ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ನಾವು ಸ್ವಲ್ಪ ಸಮಯದ ನಂತರ ಚಿತ್ರಮಂದಿರಗಳಿಗೆ ಹಿಂತಿರುಗುತ್ತೇವೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಾಶ್ಮೀರ ಫೈಲ್ಸ್ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ, ‘ನಿಮ್ಮ ಚಿತ್ರ ಪ್ರೇಮ್ ಪ್ರಕಾರನ್ ಅದ್ಭುತ ಯಶಸ್ಸನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ. ತುಂಬಾ ಧನ್ಯವಾದಗಳು’ ಎಂದು ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್‌ನ ಪ್ರಮುಖರಲ್ಲಿ ಒಬ್ಬರಾದ ನಟ ದರ್ಶನ್ ಕುಮಾರ್, ಇದು ಅಗಾಧವಾದ ಅನುಭವ ಎಂದು ಹೇಳಿದ್ದಾರೆ. ‘ಚಂದ್ರೇಶ್ ಭಟ್ ಅವರಿಗೆ ಕೃತಜ್ಞತೆ ಸಲ್ಲಿಸಲು ನನ್ನ ಬಳಿ ಪದಗಳಿಲ್ಲ. ಅವರು ನಮ್ಮ ಚಿತ್ರಕ್ಕೆ ತೋರಿದ ಎಲ್ಲಾ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಕಾಶ್ಮೀರ ಫೈಲ್ಸ್ ಈಗ ಜನರ ಚಿತ್ರವಾಗಿದೆ ಮತ್ತು ಅದನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿ ಹಿಡಿದಿದ್ದಕ್ಕಾಗಿ ವೀಕ್ಷಕರಿಗೆ ದೊಡ್ಡ ಧನ್ಯವಾದ. ‘ಪ್ರೇಮ್ ಪ್ರಕರನ್’ ಚಿತ್ರಕ್ಕೂ ನನ್ನ ಶುಭಾಶಯಗಳು ಮತ್ತು ದೊಡ್ಡ ಯಶಸ್ಸು ಸಿಗಲಿ. ಧನ್ಯವಾದಗಳು’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!