ಹೊಸ ದಿಗಂತ ಡಿಜಿಟಲ್ ಡೆಸ್ಕ್
ಈ ಹಿಂದೆಯೂ ‘ದ ಕಾಶ್ಮೀರ್ ಫೈಲ್ಸ್’ ಬಗ್ಗೆ ಅಚ್ಚರಿ ಸೂಚಿಸಿ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಗೆ ಟ್ವೀಟ್ ಮಾಡಿ ಅಭಿನಂದಿಸಿದ್ದ ಖ್ಯಾತ ನಿರ್ದೇಶಕ ರಾಮ ಗೋಪಲಾ ವರ್ಮ, ಇದೀಗ ‘ದ ಕಾಶ್ಮೀರ್ ಫೈಲ್ಸ್’ ಸಿನಿಮೋದ್ಯಮದ ಮೇಲೆ ಮಾಡಿರುವ ಪ್ರಭಾವದ ಬಗ್ಗೆ ವಿಡಿಯೊ ಬ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ.
ನಾನು ‘ದ ಕಾಶ್ಮೀರ್ ಫೈಲ್ಸ್’ ದ್ವೇಷಿಸುತ್ತೇನೆ ಎಂಬ ಶೀರ್ಷಿಕೆ ಕೊಟ್ಟಿದ್ದರೂ ವಾಸ್ತವದಲ್ಲಿ ಚಿತ್ರದ ಕತೆಯನ್ನಾಗಲೀ ಅಂಶವನ್ನಾಗಲೀ ವಿರೋಧಿಸಿ ರಾಮ ಗೋಪಾಲ ವರ್ಮ ಅವರೇನೂ ಮಾತನಾಡಿಲ್ಲ. ಬದಲಿಗೆ, ಈ ಚಿತ್ರವು ಪ್ರತಿ ನಿರ್ದೇಶಕನಿಗೆ ಇನ್ನು ಮುಂದೆ ಚಿತ್ರ ಮಾಡುವುದಕ್ಕೆ ಸವಾಲಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾವೂ ಸೇರಿದಂತೆ ಎಲ್ಲ ನಿರ್ದೇಶಕರೂ ಸಿನಿಮಾವು ವೇಗದಲ್ಲಿ ಸಾಗಬೇಕು, ಪ್ರತಿ ಹಂತದಲ್ಲೂ ವೀಕ್ಷಕರನ್ನು ಸೆಳೆದಿಡುವ ನಾಟಕೀಯತೆ ಇರಬೇಕು, ಅದಿಲ್ಲವಾದರೆ ಸ್ಟಾರುಗಳು, ಐಟಂ ಸಾಂಗ್ ಗಳು ಇರಬೇಕು ಎಂಬೆಲ್ಲ ಸೂತ್ರಗಳನ್ನು ಪಾಲಿಸುತ್ತೇವೆ. ಆದರೆ ‘ದ ಕಾಶ್ಮೀರ್ ಫೈಲ್ಸ್’ ಇವ್ಯಾವ ಸೂತ್ರಗಳನ್ನೂ ಪಾಲಿಸದೆಯೂ ವೀಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಬಹುದೆಂಬುದನ್ನು ತೋರಿಸಿದೆ. ಈ ಚಿತ್ರದಲ್ಲಿ ಪ್ರೋಕ್ಷಕರನ್ನು ರಂಜಿಸುವುದಕ್ಕೆ ನಿರ್ದೇಶಕ ಏನೂ ಮಾಡದಿದ್ದರೂ, ಕತೆ ಸಾಗುವ ವೇಗ ಬಹಳ ನಿಧಾನಗತಿಯಲ್ಲಿದ್ದರೂ ವೀಕ್ಷಕ ಸಮಯ ಕೊಟ್ಟು ನೋಡುತ್ತಿದ್ದಾನೆ.
ಹೀಗಾಗಿ, ತಾವೂ ಸೇರಿದಂತೆ ಎಲ್ಲ ನಿರ್ದೇಶಕರಿಗೆ ಮುಂದಿನ ಚಿತ್ರ ನಿರ್ದೇಶಿಸುವಾಗ ‘ದ ಕಾಶ್ಮೀರ್ ಫೈಲ್ಸ್’ ರೆಫರೆನ್ಸ್ ಆಗಿ ಇದ್ದೇ ಇರುತ್ತದೆ. ಆ ಚಿತ್ರವನ್ನು ಒಪ್ಪುತ್ತೀರೋ ಬಿಡುತ್ತೀರೋ ಆದರೆ ಅದರ ನಿರ್ಮಾಣ ಮಾದರಿಯನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ ರಾಮ ಗೋಪಾಲ ವರ್ಮ.
‘ದ ಕಾಶ್ಮೀರ್ ಫೈಲ್ಸ್’ ಜಾಡಿನಲ್ಲಿ ಇನ್ನೂ ಹೆಚ್ಚಿನ ಚಿತ್ರಗಳು ಬರಲಿವೆ. ಅವೆಲ್ಲ ಯಶಸ್ವಿಯಾಗುತ್ತವೆ ಎಂದು ಹೇಳಲಾಗದು. ಆದರೆ, ಬಾಹುಬಲಿಯಂಥ ಚಿತ್ರ ಅದ್ಭುತ ಯಶಸ್ಸಾದರೂ ಆ ಮಾದರಿಯನ್ನು ಎಲ್ಲರೂ ಕಾಪಿ ಮಾಡುವಂತಿರಲಿಲ್ಲ. ಏಕೆಂದರೆ ಅದಕ್ಕೆ ದೊಡ್ಡಮಟ್ಟದ ಹಣ ಬೇಕಿತ್ತು. ಆದರೆ ‘ದ ಕಾಶ್ಮೀರ್ ಫೈಲ್ಸ್’ ವಿಚಾರದಲ್ಲಿ ಹಾಗಲ್ಲ. ಸಾಕ್ಷ್ಯಚಿತ್ರ, ಡಿಬೇಟು, ಸಮಾಲೋಚನೆಗಳ ಫಾರ್ಮ್ಯಾಟ್ ಇಟ್ಟುಕೊಂಡೂ ಸಿನಿಮಾ ಮಾಡಬಹುದು ಹಾಗೂ ಅದನ್ನು ವೀಕ್ಷಕರು ಒಪ್ಪುತ್ತಾರೆ ಎಂಬುದನ್ನು ‘ದ ಕಾಶ್ಮೀರ್ ಫೈಲ್ಸ್’ ತೋರಿಸಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ ರಾಮ ಗೋಪಾಲ ವರ್ಮ.