ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ವಿಜಯಪುರ:
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ನಗರದ ಜಿಲ್ಲಾ ಹಾಗೂ ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮಹಾರಾಷ್ಟ್ರದ ಇಸ್ಲಾಂಪುರದ ಪರಳಿ ವೈದನಾಥ ಗ್ರಾಮದ ರಾಹುಲ್ ಅಮರ್ ಗೋಸ್ಟಿ (22) ಶಿಕ್ಷೆಗೊಳಗಾದ ಆರೋಪಿ.
ಬಾಲಕಿಯ ತಂದೆ- ತಾಯಿ ಮಹಾರಾಷ್ಟ್ರದ ಇಸ್ಲಾಂಪುರಕ್ಕೆ ಇಟ್ಟಂಗಿ ಬಟ್ಟಿ ಕೆಲಸಕ್ಕಾಗಿ ಹೋಗಿದ್ದ ವೇಳೆ, ಆರೋಪಿ ಬಾಲಕಿಯ ಕುಟುಂಬದ ಜೊತೆ ಪರಿಚಿತನಾಗಿದ್ದು, ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ. ಇಟ್ಟಂಗಿ ಬಟ್ಟಿ ಕೆಲಸ ಮುಗಿದ ಬಳಿಕ ಬಾಲಕಿಯ ತಂದೆ- ತಾಯಿಗಳು ಕುಟುಂಬ ಸಮೇತ ಪಡಗಾನೂರ ಗ್ರಾಮಕ್ಕೆ ಬಂದಿದ್ದಾರೆ. ಇದಾದ ಒಂದು ತಿಂಗಳ ಬಳಿಕ ಆರೋಪಿ ಬಾಲಕಿಯ ಗ್ರಾಮಕ್ಕೆ ಬಂದು, ಪುಸಲಾಯಿಸಿ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವೇಳೆ ದೇವರಹಿಪ್ಪರಗಿ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ, ಆರೋಪಿ ವಿರುದ್ಧ ಪೋಕ್ಸೋ ಕಾನೂನು ಅಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಇಲ್ಲಿನ ಜಿಲ್ಲಾ ಹಾಗೂ ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಸವಿತಾಕುಮಾರಿ ಎನ್. ಅವರು, ವಾದ, ಪ್ರತಿವಾದವನ್ನು ಆಲಿಸಿ, ಆರೋಪಿ ರಾಹುಲ್ ಗೋಸ್ಟಿ ಈತನಿಗೆ 20 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ವಿ.ಜಿ. ಹಗರಗುಂಡ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.