ಆಡಂಬರ, ಅಬ್ಬರದ ಪ್ರಚಾರದ ಸುಳಿವಿರದೆ ಈದುವಿನ ಆದಿವಾಸಿ ಮನೆಯಲ್ಲಿ ನಡೆಯಿತು ಶಾಸಕರ ಗ್ರಾಮವಾಸ್ತವ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಅಲ್ಲಿ ಯಾವುದೆ ಅಬ್ಬರದ ಪ್ರಚಾರವಿರಿಲ್ಲ. ವೈಟ್ ಕಾಲರಿನ, ಖಾಕಿ ಖದರಿನ ಅಧಿಕಾರಿಗಳ ಸೂಟ್ ಬೂಟಿನ ಸದ್ದು ಇರಲಿಲ್ಲ. ಜನಜಂಗುಳಿಯೂ ಇಲ್ಲ. ಕಗತ್ತಲ ಕಾಡಿನೊಳಗೆ ಜೀರುಂಡೆಗಳ ಝೇಂಕಾರದ ಶಬ್ದದ ನಡುವೆ ಅಲ್ಲಿ ಸಮಸ್ಯೆ ಹೇಳಿಕೊಳ್ಳಲು ಒಂದಷ್ಟು ಪುರುಷರು, ಮಹಿಳೆಯರು, ಮಕ್ಕಳು ಸೇರಿದ್ದರು.

ಇವರೆಲ್ಲರ ಸಮಸ್ಯೆಯ ಧ್ವನಿಗೆ ಕಿವಿಯಾಗುತಿದ್ದವರೇ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್.

ಹೌದು ಪಶ್ಚಿಮ ಘಟ್ಟದ ರಮಣೀಯತೆ ಮದ್ಯೆ ಹಲವು ವರುಷಗಳಿಂದ ವಾಸವಾಗಿದ್ದ ಈದು ಗ್ರಾಮದ ಆದಿವಾಸಿಗಳ ಸಮಸ್ಯೆ ಆಲಿಸಲು ಗುರುವಾರ ರಾತ್ರಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಗ್ರಾಮವಾಸ್ತವ್ಯ ನಡೆಸಿದರು. ಅದು ಕೂಡ ನಾಡಿನಲ್ಲಿ ಭಾರಿ ಸದ್ದು ಮಾಡಿದ್ದ ನಕ್ಸಲ್ ಪೀಡಿತ ಗ್ರಾಮ ಎನ್ನುವುದು ಇನ್ನೊಂದು ವಿಶೇಷ. ಹೊಸ್ಮಾರುವಿನಿಂದ 15 ಕಿ.ಮೀ ದೂರದ ಈದು ಕಗ್ಗತ್ತಲ ಕಾಡಿನೊಳಗಿನ ಪ್ರದೇಶಕ್ಕೆ ಯಾವುದೇ ಸದ್ದುಗದ್ದಲವಿಲ್ಲದೆ, ಪ್ರಚಾರದ ತೆವಲು ಇಲ್ಲದೆ. ಜನರು ವಾಸವಿರುವ ಕಟ್ಟ ಕಡೆಯ ಸ್ಥಳಕ್ಕೆ ಕಾಡು ದಾರಿಯಲ್ಲಿ ಹತ್ತಿಳಿದು ತೆರಳಿ ಅಲ್ಲಿ ಉಳಿದುಕೊಂಡು ರಾತ್ರಿಯಿಡಿ ನಿವಾಸಿಗಳ ಸಮಸ್ಯೆ ಆಲಿಸಿ ಮಾದರಿಯಾದರು.

ಕಿವಿಯಾದ ಶಾಸಕರು
ಕಾಡಿನೊಳಗೆ ವಾಸವಿದ್ದ ಪರಿಸರದ ನಿವಾಸಿಗಳ ನಾನಾ ಸಮಸ್ಯೆ ಅಹವಾಲಿಗೆ ಕಿವಿಯಾಗಲು ತೆರಳಿದ್ದ ಶಾಸಕರ ಬಳಿ ನಿವಾಸಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.

ಪ್ರಚಾರ ಸುಳಿಯಲೇ ಇಲ್ಲ
ಶಾಸಕರು., ಸಚಿವರು ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸುತ್ತಾರೆ ಅಂದಾಗ. ಪೂರ್ವ ಸಿದ್ದತೆಗಳು, ಸಾಕಾಷ್ಟು ಪ್ರಚಾರ ನಡೆಯುವುದು ರೂಢಿ. ಆದರೆ ಇಲ್ಲಿ ಅದ್ಯಾವುದು ಇರಲಿಲ್ಲ. ಸಮಸ್ಯೆಯನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ದಿಸೆಯಲಷ್ಟೆ ಶಾಸಕರ ಗ್ರಾಮವಾಸ್ತವ್ಯ ನಡೆಯಿತು.

ಅವರು ಹೇಳುತಿದ್ದರೆ, ಇವರು ಕೇಳುತಿದ್ದರು
ಆದಿವಾಸಿ ಸಮುದಾಯದ ದಿನೇಶ್ ಗೌಡ ಅವರ ಮನೆಯಲ್ಲಿ ಶಾಸಕರು ವಾಸ್ತವ್ಯ ಹೂಡಿದರು. ಸ್ಥಳೀಯರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾದರು. ಸರಳತೆಯಿಂದ ಬೆರೆತು ಕುಶಲೊಪರಿ ಮಾತುಕತೆಯ ಮೂಲಕ ಅಹವಾಲು ಆಲಿಸಿದರು.

ದಟ್ಟ ಅರಣ್ಯದ ನಡುವೆ 11 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ವಾಸವಾಗಿವೆ. ಇವರೆಲ್ಲ ಕೃಷಿ ಅವಲಂಬಿತರು. ಜಾನುವಾರು ಸಾಕಾಣೆಯನ್ನು ನಡೆಸಿಕೊಂಡಿದ್ದಾರೆ. ಕೋಳಿ ಸಾಕಾಣಿಕೆ ಮಾಡಿಕೊಂಡು ಸಾವಯವ ಕೃಷಿಗೆ ಒತ್ತುಕೊಟ್ಟು ಸ್ವಾಭಿಮಾನದಿಙದ ಬದುಕು ಸಾಗಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ವಿದ್ಯಾವಂತರನ್ನಾಗಿಸುವ ಪಣ ತೊಟ್ಟವರಿವರು.

ಪ್ರಕೃತಿದತ್ತ ನೀರನ್ನು ಬಳಸಿ ನೈಸರ್ಗಿಕವಾಗಿ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬಿಗಳಾಗಿ ತಮ್ಮ ದಿನ ಬಳಕೆಗೆ ಬಳಸಿಕೊಳ್ಳುತ್ತಿರುವುದನ್ನು ಶಾಸಕರು ಅಹವಾಲು ಸ್ವೀಕಾರ ಸಂದರ್ಭ ತಿಳಿದುಕೊಂಡು ನಿವಾಸಿಗಳ ಶ್ರಮದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅದಿವಾಸಿ ದಂಪತಿಗಳಿಂದ ಆತಿಥ್ಯ
ಆದಿವಾಸಿ ಮನೆಯಲ್ಲಿಯೆ ಉಳಿದುಕೊಂಡು ಉಟೋಪಚಾರವನ್ನು ಸ್ವೀಕರಿಸಿದರು. ದಿನೇಶ್ ಗೌಡ ಪುಷ್ಪ ದಂಪತಿಗಳ ಜೊತೆಗೆ ವಸಂತ ಗೌಡ, ಸತೀಶ್ ಕಾಡಿನೊಳಗಡೆ ನಿವಾಸಿಗಳು ಅನುಭವಿಸುವ ಸಮಸ್ಯೆಗಳು, ಅಲ್ಲಿನ ಮೂಲಭೂತ ಸೌಕರ್ಯ. ಸಮುದಾಯದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಈ ಕುಟುಂಬಗಳ ಅಭಿವೃದ್ದಿಗೆ ಸರಕಾರ ಮಟ್ಟದಲ್ಲಿ ಅನುದಾನ ತರಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದರು. ಪರಿಸರದ ದೇವಸ್ಥಾನ, ದೈವಸ್ಥಾನ, ಕುಲಕಸುಬು, ಕೃಷಿ ಸಂಬಂದಿತ ಸಮಸ್ಯೆಗಳನ್ನು ಸಮಧಾನ ಚಿತ್ತದಿಂದ ಆಲಿಸಿ ಸ್ಪಂದನೆಯ ಜೊತೆಗೆ ಸ್ಥಳಿಯ ದೈವಸ್ಥಾನವೊಂದರ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಿದರು.

ಸ್ವತ: ಅನುಭವ ಪಡೆದ ಶಾಸಕರು
ಶಾಸಕರು ತಾವಿದ್ದ ಮನೆಗಳಿಗೆ ಬಂದು ಅಹವಾಲು ಸ್ವೀಕರಿಸಿ, ರಾತ್ರಿ ಹೊತ್ತು ನಾಗರಿಕರು ಅನುಭವಿಸುವ ಸಂಕಟ ಆಲಿಸಿದಕ್ಕೆ ಅಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದರು. ಶಾಸಕರು ತಂಗಿದ ಮನೆಯವರು ಸೇರಿ ಡೀಕಯ್ಯ ಗೌಡ ಹಾಗೂ ಸುತ್ತಲಿನ ನಿವಾಸಿಗಳು ಸಂತ್ರಪ್ತ ಭಾವನೆಯೊಂದಿಗೆ ಶಾಸಕರನ್ನು ಬೀಳ್ಕೊಟ್ಟರು. ಶಾಸಕರು ಸಹಿತ ಜನರ ಸಮಸ್ಯೆಗಳನ್ನು ಸ್ವತ: ಅನುಭವಿಸಿ ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಭರವಸೆಯೊಂದಿಗೆ ವಾಪಸಾದರು.

ಕಾಲ್ನಡಿಗೆಯಲ್ಲೆ ಅಡವಿ ಸುತ್ತಿದರು
ಒಟ್ಟಿನಲ್ಲಿ ಪೊಡವಿಯೊಳಗೆ ಕಾಲ್ನಡಿಗೆಯಲ್ಲಿ ಸುತ್ತಾಡಿ ಶಾಸಕರು ಪ್ರಚಾರವಿಲ್ಲದೆ ಕೈಗೊಂಡ ಮೌನ ಧ್ವನಿಯಾನ ಮಾದರಿ ಎನಿಸಿತು. ಶಾಸಕರ ನಡೆ ಇತರರಿಗೆ ಪ್ರೇರಣಾದಾಯಿತ್ವ ಪಡೆಯಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!