ಅಭಿವೃದ್ಧಿಯ ಜೊತೆಗೆ ಪ್ರಾಕೃತಿಕ ಸಂಪತ್ತು ಸಂರಕ್ಷಣೆ ಅಗತ್ಯ: ಡಾ.ಬಿ.ಸಿ.ಸತೀಶ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಅಗತ್ಯ ಅಭಿವೃದ್ಧಿಯ ಜೊತೆಗೆ, ಪ್ರಾಕೃತಿಕ ಸಂಪತ್ತನ್ನು ಉಳಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು ಪುಟ್ಟ ಜಿಲ್ಲೆಯಾದರೂ ಸಹ ಹಲವು ಸಮಸ್ಯೆಗಳು ಇವೆ ಎಂಬುದನ್ನು ಮರೆಯುವಂತಿಲ್ಲ ಎಂದು ಅವರು ಹೇಳಿದರು.
ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಅಭಿವೃದ್ಧಿಯನ್ನೂ ಕಾಣಬಹುದಾಗಿದೆ. ಹಾಗೆಯೇ ಜ್ಞಾನ ಮತ್ತು ವಿಜ್ಞಾನ ವಿಚಾರಗಳನ್ನು ತಿಳಿಯಲು ಪ್ರವಾಸೋದ್ಯಮ ಸಹಕಾರಿ ಎಂದರು.
ಯೂರೋಪ್ ಖಂಡದಲ್ಲಿನ ಪುಟ್ಟ ಪುಟ್ಟ ರಾಷ್ಟ್ರಗಳು ಪ್ರವಾಸೋದ್ಯಮದಿಂದ ಸಾಕಷ್ಟು ಅಭಿವೃದ್ಧಿ ಕಂಡಿವೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ದೇಶ ವಿದೇಶದಲ್ಲಿನ ಸಂಪರ್ಕ ಬೆಸೆಯುತ್ತದೆ. ಇದರಿಂದ ಹಲವು ಕ್ಷೇತ್ರಗಳ ಅಭಿವೃದ್ಧಿ ಆಗಲಿವೆ ಎಂದರು.
ಭಾರತೀಯ ಪ್ರಾಕೃತಿಕ ಸಂಪತ್ತು ಮತ್ತು ಸಂಸ್ಕೃತಿ ಪರಿಚಯಿಸುವಲ್ಲಿ ಪ್ರವಾಸೋದ್ಯಮ ಸಹಕಾರಿ. ಆ ನಿಟ್ಟಿನಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಜೊತೆಗೆ ವೈದ್ಯಕೀಯ ಪ್ರವಾಸೋದ್ಯಮಕ್ಕೂ ಯಥೇಚ್ಛ ಅವಕಾಶವಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಪ್ರವಾಸೋದ್ಯಮ ಉತ್ಸವ ಆಯೋಜಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ್ಯಕ್ಕೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಜಿಲ್ಲೆಯಲ್ಲಿನ ಹಲವು ಸ್ಥಳಗಳನ್ನು ಪ್ರವಾಸೋದ್ಯಮ ಸ್ಥಳವಾಗಿ ಗುರುತಿಸಬೇಕಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಈಶ್ವರ ಕುಮಾರ್ ಖಂಡು ಅವರು ಮಾತನಾಡಿ ಪ್ರವಾಸೋದ್ಯಮವು ಯಾವುದೇ ರಾಷ್ಟ್ರದಲ್ಲಿ ಪ್ರಮುಖ ಉದ್ಯಮವಾಗಿದೆ. ರಾಷ್ಟ್ರದ ಆಕರ್ಷಣೆ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ರಾಷ್ಟ್ರದ ಆಜಾದಿಕ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರೀಯ ಪ್ರವಾಸೋದ್ಯಮವನ್ನು ಆಚರಿಸಲಾಗುತ್ತಿದೆ. ಗ್ರಾಮೀಣ ಮತ್ತು ಸಮುದಾಯ ಆಧಾರಿತ ಪ್ರವಾಸೋದ್ಯಮ ಹೆಸರಿನಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಏರ್ಪಡಿಸಲಾಗಿದೆ. ರಾಜಸೀಟು, ದುಬಾರೆ, ನಿಸರ್ಗಧಾಮ, ಅಬ್ಬಿ, ಇರ್ಪು ಜಲಪಾತಗಳು ಸೇರಿದಂತೆ ಹಲವು ಪ್ರವಾಸೋದ್ಯಮ ಕೇಂದ್ರಗಳು ಪ್ರವಾಸಿಗರನ್ನು ಸೆಳೆಯುತ್ತವೆ ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ಕೊಡವ ಹೆರಿಟೇಜ್ ಅಭಿವೃದ್ಧಿ, ರಾಜಾಸೀಟಿನಲ್ಲಿ ಗ್ರೇಟರ್ ರಾಜಸೀಟು ಅಭಿವೃದ್ಧಿ, ದುಬಾರೆ ಹೀಗೆ ಹಲವು ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸಲು ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಪ್ರವಾಸೋದ್ಯಮ ಒಂದು ಉದ್ಯಮವಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಉಪನ್ಯಾಸಕ ಕೆ.ಜೆ.ದಿವಾಕರ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!