ಪೊಲೀಸರ ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಮೇರಿ ಇಮಾಕ್ಯುಲೇಟ್

ಹೊಸದಿಗಂತ ವರದಿ, ಮಡಿಕೇರಿ
ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ನಿವೃತ್ತ ಮಹಿಳಾ ಎಎಸ್‍ಐ ಎ.ಮೇರಿ ಇಮಾಕ್ಯುಲೇಟ್ ನುಡಿದರು.
ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೋಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಪಥಸಂಚಲನ ಪರಿವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು, ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ ಇದ್ದಲ್ಲಿ ಉತ್ತಮ ಸೇವೆ ಸಲ್ಲಿಸಬಹುದು ಎಂದು ಅವರು ಹೇಳಿದರು.
ಪೊಲೀಸರು ಪ್ರತಿನಿತ್ಯ ಉತ್ತಮ ಸಾರ್ವಜನಿಕ ಸಂಪರ್ಕ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯೇ ಪ್ರಮುಖ ಎಂಬುದನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು. ಶಿಸ್ತಿನ ಇಲಾಖೆಯಲ್ಲಿ ಆದಷ್ಟು ಮುಂಜಾಗ್ರತೆ ವಹಿಸಿ ತಪ್ಪು ಆಗದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ಮಾಡಿದರು.
ಪೊಲೀಸ್ ಇಲಾಖೆ ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆ ಪಾಲನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದೆ. ಸೇವೆಗೆ ಸೇರಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒತ್ತಡದಿಂದ ಕಾರ್ಯನಿರ್ವಹಿಸಬೇಕಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಬೇಗನೆ ಒಳಗಾಗುವ ಸಂಭವವಿರುತ್ತದೆ. ಆ ನಿಟ್ಟಿನಲ್ಲಿ ಪ್ರತಿ ವರ್ಷ ಪೊಲೀಸ್ ಇಲಾಖೆಯಿಂದ ನಡೆಸುವ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ಮಾಡಿದರು.
ನಿರಂಜನ್’ಗೆ ಕಾರ್ಯಪ್ಪ‌‌ ಟ್ರೋಫಿ: ಡಿಸಿಆರ್‍ಬಿ ವಿಭಾಗದಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎನ್.ನಿರಂಜನ್ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಿಸಿ ಮಾತನಾಡಿದ ಏರ್ ಮಾರ್ಷಲ್ (ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು, ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ. ಆ ನಿಟ್ಟಿನಲ್ಲಿ ಸಮಾಜ ಮುಖಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಪಥ ಸಂಚಲನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಸ್ವಾಗತಿಸಿ ಮಾತನಾಡಿ, ಪೊಲೀಸರ ಸೇವೆ, ಶೌರ್ಯ, ಅರ್ಪಣಾ ಮನೋಭಾವವನ್ನು ಗೌರವಿಸುವ ಹಾಗೂ ಪುರಸ್ಕರಿಸುವ ನಿಟ್ಟಿನಲ್ಲಿ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪೊಲೀಸರು ಜನಸೇವೆಗೆ ಅರ್ಪಣಾ ಮನೋಭಾವದಿಂದ ದುಡಿಯುತ್ತಾರೆ. ಶಿಸ್ತು ಕರ್ತವ್ಯ ನಿಷ್ಠೆ ಕಾಣಬಹುದಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮತ್ತಿತರವನ್ನು ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.
ಉತ್ತಮ ಸೇವೆ ಸಲ್ಲಿಸಿದ ಪೊಲೀಸರನ್ನು ಸನ್ಮಾನಿಸಲಾಯಿತು. ಆರ್‍ಪಿಐ ಚೆನ್ನನಾಯಕ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ನಿವೃತ್ತ ಡಿಸಿಪಿ ಪೂಣಚ್ಚ, ನಿವೃತ್ತ ಪೊಲೀಸ್ ಅಧೀಕ್ಷಕ ಎ.ಕೆ.ಸುರೇಶ್, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಜೇಂದ್ರ ಪ್ರಸಾದ, ಜಯಕುಮಾರ, ಶೈಲೇಂದ್ರ, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರರು ಇದ್ದರು. ಆಂಟೋನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪೊಲೀಸ್ ಅಧೀಕ್ಷಕ ಅಪ್ಪಯ್ಯ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!