Wednesday, August 10, 2022

Latest Posts

ನರಹಂತಕ ಹುಲಿ ಸೆರೆಗೆ ತಜ್ಞರ ನಿಯೋಜನೆ: ಸೆರೆ ಇಲ್ಲವೇ ಗುಂಡಿಕ್ಕಲು ಆದೇಶ

ಹೊಸದಿಗಂತ ವರದಿ,ಮಡಿಕೇರಿ:

ದಕ್ಷಿಣ ಕೊಡಗಿನ ಕುಮಟೂರು, ಬೆಳ್ಳೂರು ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಮೂರು ಮಾನವ ಜೀವ ಬಲಿ ಪಡೆದಿರುವ ಹುಲಿಯ ಸೆರೆ ಅಥವಾ ಕಡೆಯ ಪ್ರಯತ್ನದ ಭಾಗವಾಗಿ ಗುಂಡಿಕ್ಕುವಂತೆ ಆದೇಶಿಸಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಮಾತ್ರವಲ್ಲದೇ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನೈಪುಣ್ಯತೆ ಹೊಂದಿರುವ ಬೆಂಗಳೂರಿನ ಜಿ.ಸುನಿಲ್ ಎಂಬವರನ್ನು ಕೂಡ ಕೊಡಗು ಜಿಲ್ಲೆಯಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ.
ಈ ಹಿಂದೆ ಶ್ರೀಮಂಗಲದ ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಫೆ.21 ರಂದು ವಿದ್ಯಾರ್ಥಿ ಎರವರ ಅಯ್ಯಪ್ಪ (16) ಹಾಗೂ 22 ರಂದು ಕಾರ್ಮಿಕ ಮಹಿಳೆ ಚಿಣ್ಣಿ (60) ಎಂಬವರ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಆ ಸಂದರ್ಭ ಹುಲಿಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಕೊಡಗು ಸಿಸಿಎಫ್ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹುಲಿ ಸೆರೆಗೆ ಅನುಮತಿ ನೀಡುವಂತೆ ಕೋರಿದ್ದರು. ಈ ಮನವಿ ಆಧಾರದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿಲಾಗಿತ್ತು.
ಆದರೆ ಸೋಮವಾರ (ಮಾ.8ರ) ಬೆಳಗ್ಗೆ ನಿಟ್ಟೂರು ಗ್ರಾಮದಲ್ಲಿ ಮತ್ತೆ ಹುಲಿ ದಾಳಿ ನಡೆಸಿ ಜೀವ ಬಲಿ ಪಡೆದಿರುವ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ನಿಪುಣ ವ್ಯಕ್ತಿಯನ್ನು ನಿಯೋಜಿಸಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಮಾನವ ಜೀವ ಹಾನಿಗೆ ಕಾರಣವಾಗಿರುವ ಹುಲಿಯನ್ನು ಇಲಾಖೆ ವತಿಯಿಂದ ನಿರ್ದಿಷ್ಟವಾಗಿ ಗುರುತಿಸಿ ಬಳಿಕ ಸೆರೆ ಹಿಡಿಯಬೇಕು. ಸೆರೆ ಹಿಡಿಯಲು ಅಸಾಧ್ಯವಾದಲ್ಲಿ ಮಾತ್ರವೇ ಹುಲಿಗೆ ಗುಂಡಿಕ್ಕಬೇಕೆಣದಯ ಸೂಚನೆ ನೀಡಲಾಗಿದೆ. ಗುಂಡಿಕ್ಕುವುದನ್ನು ಕೊನೆಯ ಪ್ರಕ್ರಿಯೆಯಾಗಿ ಪರಿಗಣಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದ್ದು, ಕೇಂದ್ರ ಸರಕಾರದ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್ ಅಡಿಯಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಿಸಿಸಿಎಫ್ ಅವರು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಹುಲಿಯ ಚಹರೆ: ಪೊನ್ನಂಪೇಟೆ ಹೋಬಳಿಯಲ್ಲಿ ಮಾನವರ ಜೀವ ಬಲಿಗೆ ಕಾರಣವಾಗಿರುವ ಹುಲಿಯನ್ನು 2013ರಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು. ಆ ಸಂದರ್ಭ ಈ ಹುಲಿಯನ್ನು ‘ನಾಗರಹೊಳೆ-13ಯು285’ ಎಂದು ಗುರುತಿಸಲಾಗಿತ್ತು. ಇದೇ ಹುಲಿ ಶ್ರೀಮಂಗಲ, ಟಿ.ಶೆಟ್ಟಿಗೇರಿ, ಕುಮಟೂರು ಗ್ರಾಮಗಳಲ್ಲಿ ತಿರುಗಾಡುತ್ತಿದ್ದು, ಮಾನವರ ಜೀವ ಬಲಿಗೆ ಕಾರಣವಾಗಿದೆ ಎಂದು ಬಲವಾಗಿ ನಂಬಲಾಗಿದೆ. ಅದರ ಸೆರೆಗೆ ಕಳೆದ 16 ದಿನಗಳಿಂದ ಸಾಕಾನೆ, ಬಂಡೀಪುರದ ಶ್ವಾನ ರಾಣಾ ಸಹಿತ 150ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss