Wednesday, August 10, 2022

Latest Posts

ಸಂಪೂರ್ಣ ಮಹಿಳೆಯರಿಂದಲೇ ನಡೆಯಲಿದೆ ಒಲಾ ಸ್ಕೂಟರ್ ಕಾರ್ಖಾನೆ, 10,000ಕ್ಕೂ ಹೆಚ್ಚಿನವರಿಗೆ ಕೆಲಸ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಒಂದು ದೊಡ್ಡ ಕನಸನ್ನು ಸಾಕಾರಗೊಳಿಸುವಲ್ಲಿ ನನ್ನ ಪಾತ್ರವೂ ಇದೆ ಎನ್ನುವುದೇ ಖುಷಿ ವಿಷಯ, ಓಲಾಗೆ ಸೇರಿ ಒಂದು ಕ್ರಾಂತಿ ಮಾಡುವ ಉದ್ದೇಶ ನನ್ನದು…
ಯಾವುದೀ ಕನಸು, ಕ್ರಾಂತಿ?
ಸಂಪೂರ್ಣ ಮಹಿಳೆಯರಿಂದಲೇ ನಡೆಯಲಿರುವ ಓಲಾ ಸ್ಕೂಟರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳ ಮಾತಿದು…
ಹೌದು, ಓಲಾ ಸ್ಕೂಟರ್ ಕಾರ್ಖಾನೆ ಸಂಪೂರ್ಣ ಮಹಿಳೆಯರಿಂದಲೇ ನಡೆಯಲಿದೆ. ಇಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವಕಾಶ ನೀಡಲಾಗಿದೆ.
ಈ ಬಗ್ಗೆ ಓಲಾ ಸಹಸಂಸ್ಥಾಪಕ ಹಾಗೂ ಸಿಇಒ ಭವಿಷ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.
ಕಾರ್ಖಾನೆಯಲ್ಲಿ ಸಂಪೂರ್ಣ ಮಹಿಳೆಯರು ಕೆಲಸ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಮಹಿಳೆಯರು ಸ್ವಾವಲಂಬಿಯಾಗಲು ಉದ್ಯೋಗ ಎಷ್ಟು ಮುಖ್ಯ ಎನ್ನುವುದನ್ನು ಮನಗಂಡ ಅಗರ್‌ವಾಲ್ ಇಷ್ಟು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.
ಮಹಿಳೆಯರಿಗೆ ಆರ್ಥಿಕ ಅವಕಾಶ ಒದಗಿಸುವುದರಿಂದ ಅವರ ಜೀವನ ಮಾತ್ರ ಅಲ್ಲ, ಅವರನ್ನು ನಂಬಿದ ಕುಟುಂಬಗಳ ಜೀವನವೂ ಬದಲಾಗಲಿದೆ. ಜೀವನ ಸುಧಾರಿಸಲು ಸಣ್ಣ ಸಹಾಯ ಆಗಲಿದೆ.
ಕಾರ್ಖಾನೆ ಕೆಲಸಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿದರೆ ಭಾರತದ ಜಿಡಿಪಿ ಶೇ.27ರಷ್ಟು ಹೆಚ್ಚುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ ಎಂದಿದ್ದಾರೆ.


ಇದೆಲ್ಲವನ್ನೂ ಸಾಕಾರಗೊಳಿಸಲು ಸಕ್ರಿಯ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ಅವಶ್ಯವಾಗಿದೆ. ಅದರಲ್ಲೂ ಸಿದ್ಧವಸ್ತುಗಳ ಉತ್ಪಾದನೆ ಕ್ಷೇತ್ರದಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆ ಕೇವಲ ಶೇ. 12ರಷ್ಟಿದ್ದು ಇದು ಅತಿ ಕಡಿಮೆ ಪ್ರಮಾಣ ಎಂದಿದ್ದಾರೆ. ಭಾರತವು ಪ್ರಪಂಚದ ಉತ್ಪಾದನಾ ಕೇಂದ್ರವಾಗಬೇಕಾದರೆ ನಾವು ನಮ್ಮ ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಕೌಶಲ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ಮಹಿಳೆಯರು ಅವಶ್ಯಕ. ಓಲಾ ಕಾರ್ಖಾನೆ ಸಂಪೂರ್ಣವಾಗಿ ಮಹಿಳೆಯರಿಂದ ನಡೆಯುತ್ತದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ.
10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಫುಲ್ ಟೈಂ ಉದ್ಯೋಗವಕಾಶ ನೀಡಿದ್ದೇವೆ. ಓಲಾ ವಿಶ್ವದ ಅತಿದೊಡ್ಡ ಮಹಿಳಾ ಕಾರ್ಖಾನೆಯಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss